Saturday, June 24, 2006

Posted by ಬಡಗಿ | 2 comments

ತಗ್ಗಿ ಬಗ್ಗಿ ನಡಿ !!



ಅದೊಂದು ದಿನ ನನ್ನ ಸಹೋದ್ಯೋಗಿಯ ಮದುವೆಗಾಗಿ ಚೆಂದವಾದ ಬಿದಿರಿನ ಕೊಳವೆಯಿಂದ ಮಾಡಿದ ಹೂ ಇರಿಸಬಹುದಾದ ಕುಂಡ ಕೊಂಡುಕೊಂಡೆ. ಅದು ಬಹಳ ಅಪರೂಪದ್ದೂ, ಸುಂದರವಾಗಿಯೂ ಇತ್ತು. ಕೆಲವೊಂದು ವಸ್ತುಗಳು ಆ ಸಮಯವನ್ನು ಬಿಟ್ಟರೆ ಮತ್ತೆ ಬೇಕೆಂದರೂ ಸಿಗಲಾರವು, ಎಷ್ಟೇ ಹುಡುಕಿದರೂ. ಅದನ್ನು ಪೇಪರಿನಲ್ಲಿ ಸುತ್ತಿ ಒಂದು ಕವರಿನಲ್ಲಿ ಇರಿಸಿ ನನ್ನ ದ್ವಿಚಕ್ರವಾಹನದಲ್ಲಿ ನೇತುಹಾಕಿ ಮನೆಗೆ ಹೊರಟೆ. ಮಹಾಬೋಧಿ ಆಸ್ಪತ್ರೆಯ ಸಿಗ್ನಲ್ಲಲ್ಲಿ ನಿಲ್ಲುವ ಪಟ್ಟಿಯಲ್ಲಿ ಸರಿಯಾಗಿ ಗಾಡಿ ನಿಲ್ಲಿಸಿದೆ. ಹಿಂದಿನಿಂದ ಒಬ್ಬ ಕೈನೆಟಿಕ್ ಸವಾರ ಬಂದು ನನ್ನ ಗಾಡಿಯ ಮುಂದೆ ನಿಲ್ಲಿಸಿದ. ನನಗೆ ಕೋಪ ಬಂತು. ನಾನು ಸರಿಯಾಗಿ ಪಟ್ಟಿಯ ಬಳಿ ನಿಂತಿದ್ದರೂ ಇವನು ನನಗಿಂತ ಮುಂದೆ ಬಂದು ನಿಲ್ಲಿಸಿದ್ದಾನಲ್ಲ ಎಂದು. ಹಸಿರು ದೀಪ ಬಿದ್ದೊಡನೆ ಅವನನ್ನು ಬೆನ್ನಟ್ಟಿ ಹಿಂದಿಕ್ಕಬೇಕೆಂಬ ಈರ್ಷೆಯಿಂದ ವೇಗ ಹೆಚ್ಚುಮಾಡಿದೆ. ಪೈಪೋಟಿ ಪ್ರಾರಂಭ!! ಇಬ್ಬರೂ ವೇಗದಲ್ಲಿದ್ದೆವು. ಸ್ವಲ್ಪ ದೂರ ಕ್ರಮಿಸಿದಂತೆ ಏನೋ ಭಾರಿ ಸದ್ದು, ನನ್ನದಲ್ಲ ಎಂದುಕೊಳ್ಳುತ್ತಿರಲು ದೂರದಿಂದ ಯಾರೋ ಕೂಗತೊಡಗಿದರು, ನಿಲ್ಲಿಸಿ ನೋಡಿದರೆ ಅದು ನಾನು ಕೊಂಡ ಆ ಅಪರೂಪದ ಬಿದಿರಿನ ಹೂ ಕುಂಡ, ರಸ್ತೆಯಲ್ಲಿ ಬಿದ್ದು ಚೂರಾಗಿತ್ತು. ಆಗ ಹಿರಿಯರ ಹಿತವಚನ “ತಗ್ಗಿ ಬಗ್ಗಿ ನಡಿ” ನೆನಪು ಮೂಡಿತು. ಕಾಲ ಮಿಂಚಿತ್ತು. ಅಂದಿನಿಂದ ರಸ್ತೆಯಲ್ಲಿ ಪೈಪೋಟಿಗೆ ಇಳಿಯುವುದನ್ನು ನಿಲ್ಲಿಸಿದೆ.

2 comments:

Soni said...

:-) Haan anthu on time buddhi banthu..oLLEdu..yar yendaru madkondli yake pypoti?

Anonymous said...

ಕಿಶೋರ್,
ಚೆನ್ನಾಗಿ ಬರೆಯುತ್ತಿದ್ದೀರ..ಹೀಗೆ ಮುಂದುವರೆಸಿ. ಸರಳವಾದ ಭಾಷೆ, ಶೈಲಿ. ಗಹನವಾದದ್ದನ್ನು ಹೇಳಲು ಭಾಷೆಯ ಭಾರ-ಸೋಗಿಲ್ಲದಿರುವುದು ನಿಮ್ಮ ಶಕ್ತಿ.
ಶೇಖರ್‌ಪೂರ್ಣ