
ಹತ್ತು ವರ್ಷಗಳ ಕೆಳಗೆ ಹೈದರಾಬಾದಿಗೆ ಬಂದಿದ್ದಾಗ, ಇಮ್ಲಿಬಾನ ಬಸ್ಸು ನಿಲ್ದಾಣ (ಈಗ ಮಹಾತ್ಮ ಗಾಂಧಿ) ದಲ್ಲಿ ಕನ್ನಡ ಪ್ರಭ ಕನ್ನಡ ದಿನಪತ್ರಿಕೆ ಕಂಡು ಸಂತೋಷ ಪಟ್ಟಿದ್ದೆ. ಕೊಂಡು ಓದಿ, ಹೈದರಾಬಾದಿನ ಸಮಾಚಾರಕ್ಕಾಗಿ ಕೆಲವು ಪುಟಗಳು ಮೀಸಲಾಗಿದ್ದನ್ನು ಕಂಡು ಸಂಭ್ರಮಿಸಿದ್ದೆ. ಕನ್ನಡ ಪತ್ರಿಕೆಗಾಗಿ ನಾನಿರುವ ಕಡೆಯೆಲ್ಲ ತಡಕಾಡಿದೆ, ಆದರೆ ಫಲಶೃತಿ ಇಲ್ಲ. ಹೇಗಾದರೂ ಮಾಡಿ ಕನ್ನಡ ಪತ್ರಿಕೆ ಕೊಳ್ಳಲೇ ಬೇಕೆಂಬ ಹಠದಿಂದ, ಇಮ್ಲಿಬಾನ ಬಸ್ಸು ನಿಲ್ದಾಣಕ್ಕೆ ಹೋದೆ. ಅಲ್ಲಿನ ಎಲ್ಲಾ ಪತ್ರಿಕೆ ಅಂಗಡಿಯವರನ್ನು ಕೇಳಿದೆ, ಎಲ್ಲೂ ಕನ್ನಡ ಪತ್ರಿಕೆ ಇಲ್ಲ. ಅದರಲ್ಲಿ ಒಬ್ಬ ಬಸ್ಸು ನಿಲ್ದಾಣದ ಹೊರಗೆ ಸಿಗುತ್ತದೆ ಎಂದು ಹೇಳಿದೆ. ಅಲ್ಲೆಲ್ಲ ತಡಕಾಡಿದೆ. ಆದರೆ ಅದು ಲಭ್ಯವಾಗಲಿಲ್ಲ. ನಿರಾಶನಾಗಿ ಮನೆಗೆ ಹಿಂದುರುಗಿದೆ. ಮತ್ತೊಂದು ದಿನ ಗ್ರಂಥಾಲಯಕ್ಕೆಂದು ಹೋದಾಗ ಅಫ್ಜಲ್ ಗಂಜ್‌ನಲ್ಲಿ ಕನ್ನಡ ಪತ್ರಿಕೆಗಳನ್ನು ಕಂಡು ಸಂಭ್ರಮಿಸಿದೆ. ಕೊಂಡು ಓದಿದೆ. ಈಗಲೂ ನನಗೆ ನೆನಪಿದೆ - ಬೆಂಗಳೂರಿನಲ್ಲಿರುವಾಗ ನಮ್ಮ ಮನೆಗೆ ಪ್ರಜಾವಾಣಿ ಮಾರಾಟ ಪ್ರತಿನಿಧಿ ಬಂದು ಕನ್ನಡ ಪತ್ರಿಕೆ ಹಾಕಿಸಿಕೊಳ್ಳಿ ಎಂದು ಉಚಿತವಾಗಿ ಒಂದು ವಾರ ಪತ್ರಿಕೆ ಹಾಕಿದ್ದು. ಅದೇ ಪ್ರಜಾವಾಣಿಯ ಪತ್ರಿಕೆಯವರು ಹೈದರಾಬಾದಿನ ಆವೃತ್ತಿ ಯಾಕೆ ತರಲಿಲ್ಲ ಎಂದು ಬೇಸರಿಸಿದೆ. ಬೆಂಗಳೂರಿನಲ್ಲಿ ಮನೆ ಮನೆಗೆ ಪ್ರಚಾರ ಮಾಡಿ ಬರುವ, ಜಾಹೀರಾತುಗಳನ್ನು ಪ್ರಕಟಿಸುವ ಪ್ರಜಾವಾಣಿ ಪತ್ರಿಕೆಯವರು ಇಲ್ಲಿ ಯಾಕೆ ಆ ಪ್ರಯತ್ನ ಮಾಡಿ ಮಾರುಕಟ್ಟೆ ವಿಸ್ತರಿಸಲಿಕ್ಕಿಲ್ಲ? ಉಡುಪಿ ಹೋಟೆಲುಗಳ ಹತ್ತಿರ ಒಂದು ವಾರ ನಿಂತು ಪ್ರಚಾರ ಮಾಡಿ ಮಾರಾಟ ಮಾಡಿದರೆ ಪತ್ರಿಕೆಯ ಮಾರುಕಟ್ಟೆ ವಿಸ್ತರಿಸಲು ಅನುಕೂಲವಾಗುವುದಿಲ್ಲವೇ? ಕನ್ನಡ ಪ್ರಭ ಹೈದರಾಬಾದಿನ ಆವೃತ್ತಿ ನಿಂತು ಈಗ ಕಲ್ಬುರ್ಗಿಯ ಸಮಾಚಾರ ಹೈದರಾಬಾದಿಗೆ ರವಾನಿಸುತ್ತಿದ್ದಾರೆ. ಆದರೆ ಅದರಲ್ಲಿ ಹೈದರಾಬಾದಿನ ಸುದ್ದಿಗಳು ಇಲ್ಲ. ಯಾಕೆ? ನನಗಂತೂ ಅರ್ಥವಾಗಿಲ್ಲ. ಇಲ್ಲಿನ ತೆಲುಗು ದಿನ ಪತ್ರಿಕೆಗಳು ದೈನಿಕೆ ಪುರವಣಿಗಳನ್ನು ಸ್ಥಳೀಯ ವಾರ್ಡುಳ ಸುದ್ದಿ ಮುಟ್ಟಿಸುವಾಗ, ಒಂದು ದೊಡ್ಡ ನಗರದ ಸುದ್ದಿ ಕನ್ನಡ ಪತ್ರಿಕೆಗೆ ಮುಟ್ಟಿಸಲು ಸಾಧ್ಯವಾಗಲಿಲ್ಲವೇ? ಬೆಂಗಳೂರಿನಲ್ಲಿರುವ ತೆಲುಗು ಪತ್ರಿಕೆಗಳು, ಕರ್ನಾಟಕದ ಸುದ್ದಿಗಾಗಿ ಪುಟಗಳನ್ನು ಮೀಸಲಿರಿಸುವಾಗ, ಕನ್ನಡದ ಪತ್ರಿಕೆಗಳು ಯಾಕೆ ಕರ್ನಾಟಕ ಹೊರಗಿನ ಜನತೆಗೆ ಬರೀ ಕರ್ನಾಟಕದ ಸುದ್ದಿಯನ್ನಷ್ಟೇ ಉಣಬಡಿಸುತ್ತವೆ? ಸಂಯುಕ್ತ ಕರ್ನಾಟಕ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳನ್ನು ಸಿಕಂದ್ರಾಬಾದಿನಲ್ಲಿ ಕಂಡು ಸಂತಸಿಸಿದೆ, ಆದರೆ ಅವುಗಳಲ್ಲಿ ಆಂಧ್ರಾ ಸುದ್ದಿಗಳು ಲಭ್ಯವಿರಲಿಲ್ಲ.
1 comments:
ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ. ನಾನು ಹೈದರಾಬಾದಿನಲ್ಲಿ ಅದನ್ನು ಅಕ್ಷರಶಃ ಅನುಭವಿಸಿದ್ದೇನೆ.
Post a Comment