Thursday, October 02, 2008

Posted by ಬಡಗಿ | 0 comments

ಸೌರ ದೀಪ


ನಾವು ಮನೆ ಕಟ್ಟಿಸುತ್ತಿದ್ದಾಗ ಒಬ್ಬ ಸೌರ ದೀಪ ಮಾರಾಟ ಪ್ರತಿನಿಧಿ ಸೌರ ದೀಪ ಹಾಕಿಸಲು ದಂಬಾಲು ಬಿದ್ದ. ಆಗಲಿ ಎಂದು ಅಮ್ಮ ಅವನಿಗೆ ಹೇಳಿ ಅವನ ವಿಸಿಟಿಂಗ್ ಕಾರ್ಡ್ ಪಡೆದುಕೊಂಡಿದ್ದರು. ನಂತರ ನಾವು ಅವನನ್ನು ದೀಪಕ್ಕಾಗಿ ಕರೆಯಲೇ ಇಲ್ಲ. ನೀರು ಕಾಯಿಸಲು ಆಗಲೇ ಮಾಡಿನ ಮೇಲೆ ಸೌರ ತಟ್ಟೆಗಳಿದ್ದರಿಂದ ಇದರ ಬಗ್ಗೆ ಅಷ್ಟೊಂದು ಕಾಳಜಿ ಕೊಡಲಿಲ್ಲ. ಮೊನ್ನೆ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾದಾಗಲೇ ಅದರ ಅವಶ್ಯಕತೆ ಕಂಡು ಬಂದಿದ್ದು.

ಕತ್ತಲೆಯಲ್ಲಿ ವಿದ್ಯುತ್ ಇಲ್ಲದಿದ್ದಾಗ ಎಮರ್ಜೆನ್ಸಿ ಲ್ಯಾಂಪ್‌ಗಳು ಹಲವಾರು ಉಪಯೋಗಿಸಿದ್ದಿದೆ. ಹಲವಾರು ಬಾರಿ ವಿವಿಧ ಕಳಪೆ ಎಮರ್ಜೆನ್ಸಿ ಲ್ಯಾಂಪ್‌ಗಳನ್ನು ಒಳ್ಳಯವೆಂದು ಅಂಗಡಿಯವ ಹೇಳಿದ್ದರಿಂದ ಅವುಗಳನ್ನು ಕೊಂಡು ಕೈ ಸುಟ್ಟುಕೊಂಡದ್ದಿದೆ. ಒಂದೊಮ್ಮೆ ಬಿ.ಪಿ.ಎಲ್ ಕಂಪನಿಯ ಎಮರ್ಜನ್ಸಿ ಲ್ಯಾಂಪ್ ಕೊಂಡು ಅದು ಒಂದು ವರ್ಷ ವ್ಯಾರಂಟಿ ಮುಗಿದ ಕೂಡಲೇ ಕೆಟ್ಟಿದ್ದರಿಂದ ಅದೇ ಕಂಪನಿಯ ಕಛೇರಿಗೆ ಹಿಂದಿರುಗಿಸಿದ್ದು ಇದೆ. ಇತ್ತೀಚೆಗೆ ಸೌರ ದೀಪವೊಂದು ಕೊಂಡುಕೊಳ್ಳಬೇಕೆಂಬ ಹಂಬಲ ಹೆಚ್ಚಿದ್ದರಿಂದ ಅದರ ಹುಡುಕಾಟಕ್ಕೆ ಮುಂದಾದೆ.

ಸೌರ ದೀಪಕ್ಕೆ ಹುಡುಕಾಡುತ್ತಿರುವಾಗ ತಿಳಿದದ್ದು "ಎಲ್.ಇ.ಡಿ" ದೀಪಗಳ ಬಗ್ಗೆ. "ಎಲ್.ಇ.ಡಿ" ಎಂದರೆ ಲೈಟ್ ಎಮಿಟಿಂಗ್ ಡೈಯೋಡ್. ಬಹಳ ಕಾಲದಿಂದ ನಮ್ಮ ಹಲವಾರು ವಿದ್ಯುನ್ಮಾನ ಸಾಧನೆಗಳ ಅಂಗವಾಗಿ ಬಳಕೆಯಲ್ಲಿದೆ. ಅದು ಟೀವಿಯಲ್ಲಿ ಕೆಂಪು, ಹಸಿರು ಬಣ್ಣವಾಗಿ, ಸಂಚಾರ ಸಿಗ್ನಲ್ ದೀಪಗಳಲ್ಲಿ ಕಾಣಬಹುದು, ಮೊಬೈಲ್ ಚಾರ್ಜರ್‍ಗಳಲ್ಲಿ, ದೇವರ ಫೋಟೋಗಳಿಗೆ ಅಳವಡಿಸಿರುವುದನ್ನು ಕಾಣಬಹುದು. ಈ "ಎಲ್.ಇ.ಡಿ"ಗಳು ಬಹಳ ಕಡಿಮೆ ವಿದ್ಯುತ್ ಉಪಯೋಗಿಸುತ್ತವೆ. ಆದರೆ ಪ್ರಕಾಶ? ಇತ್ತೀಚಿಗೆ ಅವುಗಳು ಹೆಚ್ಚಿನ ಪ್ರಕಾಶವನ್ನು ಕೊಡುವಂತೆ ತಯಾರಿಸಿದ್ದಾರೆ. ಇತ್ತೀಚೆಗೆ ಎಲ್ಲರೂ ವಿದ್ಯುತ್ ಉಳಿಸಲು "ಸಿ.ಎಫ್.ಎಲ್" ದೀಪಗಳನ್ನು ಉಪಯೋಗಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ "ಸಿ.ಎಫ್.ಎಲ್" ಸ್ಥಾನವನ್ನು ಈ "ಎಲ್.ಇ.ಡಿ"ಗಳು ತುಂಬುವುದನ್ನು ನಾವು ಕಾಣಲಿದ್ದೇವೆ. ಸೌರ ದೀಪಗಳಲ್ಲಿ ಹೆಚ್ಚಿನವು "ಸಿ.ಎಫ್.ಎಲ್" ದೀಪವನ್ನು ಅಳವಡಿಸಿಕೊಂಡಿರುವುದನ್ನು ನಾವು ಕಾಣಬಹುದು.

"ಎಲ್.ಇ.ಡಿ"ದೀಪವನ್ನು ಎಮರ್ಜೆನ್ಸಿ ದೀಪವಾಗಿ, ಟಾರ್ಚಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಉಪಯೋಗಕ್ಕೆ ಬರುತ್ತಿರುವುದು ಸಂತೋಷದ ವಿಷಯ. "ಎಲ್.ಇ.ಡಿ"ಯನ್ನು ಬಳಸಿರುವ ಒಂದು ದೀಪವನ್ನು http://thrive.in/brochures/Accendo.pdf ಈ ವಿಳಸದಲ್ಲಿ ಕಂಡೆ. ಇದಕ್ಕೆ ಸೌರ ತಟ್ಟೆ ಅಳವಡಿಸಿದರೆ ಹೆಚ್ಚು ಸಮಯ ಬೆಳಕು ಕೊಡುವ ಒಂದು ದೀಪ ಲಭ್ಯವಾಗುವುದೆಂದು ನನ್ನ ಅನಿಸಿಕೆ.
ಚಿತ್ರ ಕೃಪೆ: solar.envirohub.net/

0 comments: