14 Aug.
Posted by
ಬಡಗಿ
|
0
comments
ಅಲ್ಪ ಬುದ್ಧಿ

ಮೈಗಳ್ಳರ ಬಗ್ಗೆ ರಾಜ-ಮಂತ್ರಿಯ ಕಥೆ ಓದಿದ್ದೇ - "ರಾಜ ಕೈಲಾಗದವರಿಗಾಗಿ ಕೆಲವು ಮನೆಗಳನ್ನು ಕಟ್ಟಿಸಿದ್ದ. ಆದರೆ ಮೈಗಳ್ಳರೆಲ್ಲ ಕೈಲಾಗದವರಂತೆ ನಟಿಸಿ ಆ ಮನೆಗಳನ್ನು ಆಕ್ರಮಿಸಿದ್ದರು. ಚಿಂತಿತನಾದ ರಾಜ ಮಂತ್ರಿಯೊಂದಿಗೆ ಮೈಗಳ್ಳರನ್ನು ಓಡಿಸಲು ಉಪಾಯ ಕೇಳಿದ. ಅದಕ್ಕೆ ರಾಜ ಒಂದು ದಿನ ಆ ಮನೆಗಳಿದ್ದ ಕಡೆ ಸಭೆ ಕರೆದು ನಿಮಗೆಲ್ಲ ಸುಂದರವಾದ ಹೊಸ ಮನೆಗಳನ್ನು ಅನತಿ ದೂರದಲ್ಲಿ ಕಟ್ಟಿಸಿದ್ದೇವೆ. ನಿಮಗೆ ಇಷ್ಟ ಬಂದ ಮನೆಗಳಿಗೆ ಬೇಗ ಸೇರಿಕೊಳ್ಳಿ ಎಂದು ಸಾರಿದ. ಆಗ ಓಡಲು, ನಡೆಯಲು ಸಾಧ್ಯವಾದವರು ಆ ದಿಕ್ಕಿನಲ್ಲಿ ನಡೆದರು. ಕೈಲಾಗದವರು ಅಲ್ಲೇ ಉಳಿದರು" - ಹೀಗೆ ಕೈಲಾಗದವರು ಮತ್ತು ಮೈಗಳ್ಳರನ್ನು ಬೇರ್‍ಪಡಿಸಿದ ಮಂತ್ರಿ.
ಬೆಂಗಳೂರಿನಲ್ಲಿ ಎಲ್ಲಾದರೂ ಓಡಾಡುವಾಗ ಭಿಕ್ಷುಕರ ಕಾಟ. ಹೊಟೆಲ್‌ಗಳ ಹತ್ತಿರ, ಉದ್ಯಾನವನದಲ್ಲಿ..... ಹೀಗೆ ಹಲವಾರು ಭಿಕ್ಷುಕರನ್ನು ನೋಡಿದ ನಾನು (ಬಹಳಷ್ಟು ಮಂದಿ ಮೈಗಳ್ಳರು) ಇತ್ತೀಚೆಗೆ ಮಲ್ಲೇಶ್ವರದಲ್ಲಿ ನನ್ನ ತಾಯಿಯ ಜೊತೆ ದರ್ಶಿನಿ ಹೋಟೆಲ್ನಲ್ಲಿ ಬೀದಿ ಬದಿಯಲ್ಲಿ ತಿನ್ನುತ್ತಿರುವಾಗ ಒಬ್ಬ ಬ್ಯಾಂಡೇಜ್ ಸುತ್ತಿದ್ದ ಯುವಕ ಬಂದ. ನಾನು ತಿನ್ನುತ್ತಿದ್ದ ತಿಂಡಿಯ ಕಡೆ ನೋಡಿದ, ನನ್ನನ್ನು ನೋಡಿದ. ತಿನ್ನಬೇಕೆನಿಸಿತೋ ಏನೋ? ನಾನು ಭಿಕ್ಷುಕರ ಹಾವಳಿಯಿಂದ ಬೇಸತ್ತು ಆತನ ಕಡೆ ನೋಡಬಾರದೆನಿಸಿ ಬೇರೆಡೆ ಮುಖ ತಿರುಗಿಸಿ ತಿನ್ನ ತೊಡಗಿದೆ. ಆದರೆ ತಿಂಡಿ ಸೇರೀತೆ? ತಿಂಡಿ ತಿನ್ನಲು ಮನಸ್ಸು ಬರದೇ, ಆತನ ಕಡೆ ನೋಡಿದೆ. ಕಡೆಗೆ ೧೦ ರೂಪಾಯಿ ನೀಡಿ ತಿಂಡಿ ತಿನ್ನಲು ಹೇಳಿದೆ. ಆತ ದುಡ್ಡು ತೆಗೆದುಕೊಳ್ಳಲಿಲ್ಲ. ಕೊನೆಗೆ ನಾನೇ ಇಡ್ಲಿ ಪಾರ್ಸಲ್ ಮಾಡಿಸಿ ಕೊಟ್ಟೆ. ಆದರೆ ಆತನಿಗೆ ತಿನ್ನಲು ಮನಸ್ಸು ಬರಲಿಲ್ಲ. ಆತನಿಗೆ ಇಹ ಲೋಕದ ಪರಿವೆಯೇ ಇಲ್ಲ. ಆತನೊಬ್ಬ ಹುಚ್ಚನಾಗಿದ್ದ. ಆತ ಮೊದಲ ನಾನು ತಿನ್ನುತ್ತಿದ್ದ ತಿಂಡಿಯನ್ನು ನೋಡಿದಾಗ ಕೊಟ್ಟಿದ್ದರೆ ತಿನ್ನುತ್ತಿದ್ದನೋ ಏನೋ? ಎಲ್ಲರನ್ನೂ ಒಂದೇ ಅಳತೆಗೋಲಿನಿಂದ ಅಳೆಯುವ ಈ ನನ್ನ ಅಲ್ಪ ಬುದ್ಧಿಗೆ ಬೆಂಕಿ ಬೀಳಲೆಂದು ಆಶಿಸಿ ಬೇಸರದಿಂದ ಅಮ್ಮನೊಡನೆ ಮುಂದೆ ನಡೆದೆ.
0 comments:
Post a Comment