Thursday, April 02, 2026

Posted by ಬಡಗಿ | 0 comments

ಕನಿಷ್ಕ ಕನ್ನಡ ಫಾಂಟ್

 

ಈ ಫಾಂಟ್ ತಯಾರಿಯ ಕತೆ.  ಕತೆ ಓದಲು ಇಶ್ಟವಿಲ್ಲದವರು, ನೇರವಾಗಿ ಕೆಳಗಿನ ಕೊಂಡಿಯಲ್ಲಿರುವ ಫಾಂಟ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿ ವಿನಂತಿ!

ಕನಿಷ್ಕ - ನನ್ನ ತಂಗಿಯ ಮಗಳು.

೨೦೨೩ ರಲ್ಲಿ ನನ್ನ ಮಗಳ ಹೆಸರಿನ ಫಾಂಟ್ ಬಿಡುಗಡೆಗೊಳಿಸಿದ್ದೆ. (ಅದರಲ್ಲಿ ಇನ್ನೂ ಹಲವಾರು ಸುಧಾರಣೆಗಳು ತರಬೇಕಾಗಿದೆ).  ಆಗ ಕನಿಷ್ಕ’ಳ ಹೆಸರಿನ ಒಂದು ಫಾಂಟ್‌ಅನ್ನು ತರಲು ಯೋಚಿಸಿದ್ದೆ.  ದಿನಗಳು ಬೇಗ ಉರುಳಿದವು, ಕೆಲಸದ ಒತ್ತಡ, ಬೆಂಗಳೂರು-ಹೈದರಾಬಾದಿನ ನಡುವಿನ ಓಡಾಟ, ಚಿಲುಮೆ, ಕನ್ನಡ ಸಾಹಿತ್ಯ ತಾಣಗಳ ನಿರ್‍ವಹಣೆಗಳಿಂದಾಗಿ ಕಾಲ ಕೂಡಿಬಂದಿರಲಿಲ್ಲ.

ಇಂದು ಕನಿಷ್ಕಾಳ ಹುಟ್ಟುಹಬ್ಬವಾದುದರಿಂದ ಈ ಫಾಂಟನ್ನು ಬಿಡುಗಡೆಗೊಳಿಸುತ್ತಿದ್ದೇನೆ.

ಕನ್ನಡದಲ್ಲಿ ಎಲ್ ಈ ಡಿ ಸೆಗ್‌ಮೆಂಟ್ ಫಾಂಟ್ ಇಲ್ಲದಿರುವುದು ಕಂಡಿತು.  ಸೆಗ್‌ಮೆಂಟ್ ಫಾಂಟ್ ಆದುದರಿಂದ, ಒಂದು ಅಚ್ಚು ತಯಾರಿಸಿ, ಅದನ್ನು ಮತ್ತಷ್ಟು ಹಾಕಿದರೆ ಬೇಗನೆ ಫಾಂಟ್ ಮುಗಿಸುವುದು ಎಂದು ಕೆಲಸ ಸುರುಮಾಡಿದೆ.  ಕನ್ನಡದಲ್ಲಿ ಒತ್ತಕ್ಷರಗಳು ತುಂಬಾ ಇರುವುದರಿಂದ ಹೆಚ್ಚು ಅಚ್ಚುಗಳು ಇದ್ದರೆ ಒಳ್ಳೆಯದೆಂದು ೫x೫ ಗ್ರಾಫ್ ಹಾಳೆಯಲ್ಲಿ ಮಾಡಿದೆ.

ಕಂಪ್ಯೂಟರ್‌ನಲ್ಲಿ ಅಚ್ಚು ಮೂಡಿಸಿದಾಗ ತುಂಬಾ ಸಣ್ಣಕಲಾಗಿ ಓದುವುದೇ ಕಶ್ಟದಂತೆ ಕಂಡಿತು.  ಸರಿ ೩x೩ ಮಾಡುವ ಎಂದು ಮಾಡಿದಾಗ ಅದೂ ಅಶ್ಟು ಸರಿ ಕಾಣಲಿಲ್ಲ.

ಕೊನೆಗೆ ಅಂತರ್‍ಜಾಲದಲ್ಲಿ ಹುಡುಕುತ್ತಿರುವಾಗ ೨x೨ ಚಂದವಾಗಿ ಕಂಡಿತು.  ಕೆಲಸ ಶುರುಮಾಡಿದೆ.  ಆದರೆ ಮೊದಲ ಅಚ್ಚು ಮಾಡುವುದೇ ಒಂದು ಕಶ್ಟದ ಕೆಲಸವಾಗಿತ್ತು.  ಅದು ಆದ ಮೇಲೆ ಕನ್ನಡದ ಎಲ್ಲಾ ಅಕ್ಷರಗಳು ಅಚ್ಚಿನಲ್ಲಿದ್ದಂತೆ ಮಾಡಲು ಆಗದು ಎಂದು ಮನವರಿಕೆಯಾಗಿ ಹಲವಾರು ಕಡೆ ಹೆಚ್ಚು ಕಡಿಮೆ ಮಾಡಿಕೊಂಡಿದ್ದೇನೆ.

ಕೆಲವು ಬಾರಿ ಅಚ್ಚಿನ ಪ್ರಕಾರ ಅಕ್ಷರಗಳು ಮಾಡಲು ಆಗದೆ ಆಫೀಸಿನ ಲಿಫ್ಟ್‌ನಲ್ಲಿ ಮೂಡುವ ಅಕ್ಷರಗಳು, ಬಂಡಿಯಲ್ಲಿನ ಸ್ಪೀಡೋಮೀಟರ್‍ ಸಂಖ್ಯೆಗಳನ್ನು ಗಮನಿಸಿದ್ದಿದೆ.

ತಪ್ಪುಗಳು ಕಂಡುಬಂದಲ್ಲಿ ಕೆಳಗಿನ ಕಮೆಂಟ್ ಅತವಾ ನನ್ನ ಗಿಟ್ ಹಬ್ ನಲ್ಲಿ ತಿಳಿಸಿ - https://github.com/kishorechan

ಫಾಂಟ್ ಅನ್ನು ಕೆಳಗಿನ ಕೊಂಡಿಯಲ್ಲಿ ಡೌನ್‌ಲೋಡ್ ಮಾಡಿ.



0 comments: