Slide 1 Slide 2 Slide 3 Slide 4 Slide 5 Slide 6

Thursday, April 09, 2020

Posted by ಬಡಗಿ | 0 comments

ಕರೋನಾ ವಾಣಿ

ಹೆಚ್ಚೇನಿಲ್ಲ ನನ್ನ ಅವಾಂತರ
ಇಂದೇ ನಾನು ಹೊರಟರೂ ಭೂತಾಯಿಗೆ ಗಂಡಾಂತರ
ತರುವಿರಿ ಮನುಜರು ನೀವು ನಿರಂತರ

ಇಷ್ಟಾದರೂ ಕಲಿತಿಲ್ಲ ಜನತೆ ಪಾಠ
ಸುಖಾಸುಮ್ಮನೆ ಬೀದಿಗಳಲ್ಲಿ ಓಡಾಟ
ಸ್ವಚ್ಛತೆ ಇಲ್ಲದೆಡೆ ಮಾಡುವಿರಿ ಊಟ

ಏರಿಸಿದಿರಿ ನೀವು ನಿಮ್ಮ ಸಂಖ್ಯೆ
ಬಗೆದಿರಿ ಭೂತಾಯ ಒಡಲ ಇಲ್ಲದೆ ಅಂಕೆ
ಪ್ರಾಣಿ ಪಕ್ಷಿಗಳನು ಕೊಂದಿರಿ ಮೂಡದೆ ಶಂಕೆ

ನೀವುಗಳು ಕಲಿಯದೆ ಪಾಠ
ನಾ ಕೀಳೆನು ಓಟ
ಇಂದು ಓಡಿಸಿದರೂ ಮತ್ತೆ ಬರುವೆ, ನಿಲ್ಲುವವರೆಗೂ ನಿಮ್ಮ ಹಾರಾಟ!!
*****
Read more...

Monday, February 17, 2020

Posted by ಬಡಗಿ | 0 comments

ಹೌದು ಹುಲಿಯ

ಹೌದು ಹುಲಿಯ!! ಇದನ್ನು ಚಿತ್ರದಲ್ಲಿ ಸೆರೆಹಿಡಿಯುವ ಪಯತ್ನ
Read more...

Sunday, December 01, 2019

Posted by ಬಡಗಿ | 0 comments

ವಾಟ್ಸಾಪ್ ಕನ್ನಡ ಗುಂಪುಗಳು

ಗೊತ್ತು ಗುರಿಯಿಲ್ಲದ ಹುಟ್ಟಿಕೊಂಡಿವೆ
ಹಲವಾರು ವಾಟ್ಸಾಪ್ ಕನ್ನಡ ಗುಂಪುಗಳು

ಗುರಿ ಏನೆಂದು ಕೇಳಿದೊಡೆ ದೊರಕದು
ನಿರ್‍ವಾಹಕರಿಂದ ಉತ್ತರಗಳು


ಹೆಚ್ಚಿನವರಿಗೆ ಏನೊಂದು
ಸಾಧಿಸುವ ಹಂಬಲವಿಲ್ಲ

ಗುಂಪಿನಲ್ಲಿ ಸೇರಿಕೊಂಡು
ನಡೆಯೋಣವೆಂಬ ಕುರಿಗಳೇ ಹೆಚ್ಚಿನವೆಲ್ಲ


ಹಂಚುವರು ಪರಭಾಷಾ
ನಗೆಹನಿ ಹಾಡು ಚಿತ್ರಗಳನ್ನ

ಕಲಿಸುವರು ಗುಂಪಿನ ಕುರಿಗಳಿಗೆ
ಪರಭಾಷೆಗಳನ್ನ


ಹೆತ್ತ ತಾಯಿಗಿಂತ ಪರರ ತಾಯಿಯೇ
ಇವರಿಗೆ ಮಿಗಿಲು

ಹುಸಿ ದೇಶ ಭಕ್ತಿಯೆಂಬ
ಅಮಲು


ಮತದಾನದ ಸಮಯದಲ್ಲಂತೂ ಅವರವರ
ನಾಯಕರ ಮೇಲೆ ಎಲ್ಲಿಲ್ಲದ ಭಕ್ತಿ

ನೆರೆ, ಬರ, ಅಭಿವೃದ್ಧಿಯೋಜನೆಯ ಬಗ್ಗೆ
ಕೇಳಿ, ಕುಂದಿರುತ್ತೆ ಅವರ ಶಕ್ತಿ


ತಿಳಿ ಹೇಳಿದರೂ ಬೆಳೆಸಿಕೊಳ್ಳರಿವರು
ಸ್ವಾಭಿಮಾನವನ್ನ

ನಿಜವಾಗಿಸುವರು ಕನ್ನಡಿಗರಿಗೆ ಕೆಚ್ಚಿಲ್ಲವೆಂಬ
ನಾಣ್ನುಡಿಯನ್ನ
*****
Read more...
Posted by ಬಡಗಿ | 0 comments

ಸಾಹಿತ್ಯ ಮಂದಿರದ ಮುಖಪುಸ್ತಕ

ಮಂದಿರದ ಮುಖಪುಸ್ತಕದ ಅಂಕಣದಲ್ಲಿ
ಏನುಂಟು ಏನಿಲ್ಲ!

ಸುದ್ದಿ, ಸಂಗೀತ, ಮಾರಾಟದ ಕೊಂಡಿಗಳು
ಸಾಹಿತ್ಯ ಎಲ್ಲಿ ಎಂದು ಕೇಳದಿರಿ

ಸಾಹಿತ್ಯ ಇವೆಲ್ಲದರಲ್ಲೂ ಇವೆಯಲ್ಲ!!
*****

ಹೈದರಾಬಾದಿನ ಕನ್ನಡ ಸಾಹಿತ್ಯ ಮಂದಿರದ ಫೇಸ್ ಬುಕ್ ಪುಟ ಕುರಿತಾಗಿ.
Read more...

Thursday, May 30, 2019

Posted by ಬಡಗಿ | 0 comments

ಉಘೇ ಮಾದಪ್ಪ!!

ಬೌದ್ಧ ಬಾವುಟಗಳನ್ನು ಕಂಡಿದ್ದೆ.  ಇದೇ ರೀತಿ ನಮ್ಮ ಕನ್ನಡ ನುಡಿಯಲ್ಲಿ ಕನ್ನಡ ದೇವರುಗಳ ಬಾವುಟ ಬಂಡಿಗಳಲ್ಲಿ ಉಪಯೋಗಿಸಲು ಮಾಡಬೇಕೆನ್ನುವ ಹಂಬಲ ಬಹಳ ದಿನದಿಂದ ಕಾಡಿದ್ದಿದೆ.  #ಕನ್ನಡಕ್ಕಾಗಿ_ಮಾಡು #MakeforKannada ಕ್ಕಾಗಿ ನನ್ನ ಪುಟ್ಟ ಕಾಣಿಕೆ.  ಇದನ್ನು ಯಾರು ಬೇಕಾದರೂ ಅನುಮತಿ ಇಲ್ಲದೆ ಉಪಯೋಗಿಸಬಹುದು.Read more...

Sunday, February 17, 2019

Posted by ಬಡಗಿ | 0 comments

ಕನ್ನಡ ಹಳಿಬಂಡಿ ಚೀಟಿ

ಕೋಡ್ ಪೆನ್ ನಲ್ಲಿ ಓಲಿವಿಯ ಎನ ಜಿ ಯವರ ಕೋಡ್ ಬಳಸಿ ತಯಾರಿಸಿದ ಕನ್ನಡ ಹಳಿಬಂಡಿ ಚೀಟಿ.
https://codepen.io/oliviale/projects/public/#
Read more...

Tuesday, November 25, 2014

Posted by ಬಡಗಿ | 0 comments

ಐದು ಕಿಲೋ ಚಾಕಲೇಟು

ಜವನಕ್ಕನ ಕೆರೆಯ ದಡದಲ್ಲಿ ಸಣ್ಣ ಚಾಕಲೇಟ್ ಖಾರ್ಕಾನೆಯೊಂದು ಇತ್ತು.  ಖಾರ್ಕಾನೆ ಸಣ್ಣದಾದರೂ ಅದರ ತಯಾರಿಕೆಯ ಚಾಕಲೇಟುಗಳು ಬಹಳ ಶುಚಿ ರುಚಿಯಾಗಿದ್ದವು.  ಅದರ ಒಡೆಯರಾದ ನಿತೇಶ ಶೆಟ್ಟಿಯವರು ಬಹಳ ಶಿಸ್ತಿನ ಮನುಷ್ಯ.  ಎಲ್ಲದರಲ್ಲೂ ಅಚ್ಚುಕಟ್ಟು, ಕಟ್ಟುನಿಟ್ಟು.  ಖಾರ್ಕಾನೆಯನ್ನು ಸ್ವಚ್ಫವಾಗಿ, ಇಲಿ ಜಿರಲೆಗಳಿಂದ ಮುಕ್ತವಾಗಿ ಇಟ್ಟಿದ್ದರು.

ಹೊಸದರಲ್ಲಿ ಅವರ ಚಾಕಲೇಟನ್ನು ಮಾರಲು ಬಹಳ ಕಷ್ಟಪಡಬೇಕಾಗುತ್ತಿತ್ತು.  ಕಾರ್ಮಿಕರಿಗೆ ತಿಂಗಳ ಸಂಬಳ ಸರಿಯಾಗಿ ಕೊಡುವುದೇ ಒಂದು ಸಾಹಸವಾಗಿದ್ದಿತು.  ದಿನ ಕಳೆದಂತೆ, ಇವರ ಚಾಕಲೇಟುಗಳಿಗೆ ಬೇಡಿಕೆ ಹೆಚ್ಚಾಗಿ, ವಿಸ್ತರಿಸಬೇಕಾಯಿತು.

ಕಾರ್ಖಾನೆ ಬೆಳೆದಂತೆಲ್ಲ ತೊಂದರೆಗಳು ಬೆಳೆಯತೊಡಗಿದವು.  ಸರ್ಕಾರಿ ವಿದ್ಯುತ್ ಸಂಸ್ಥೆಯವರು ಬೇಕೆಂತಲೆ ಇವರಿಗೆ ಹರಿಯುವ ವಿದ್ಯುತ್ ಕತ್ತಿರಿಸುವುದು, ವಿವಿಧ ಸಬೂಬು ನೀಡಿ ತಂತಿ ಮುರಿದಿದೆ ಎಂದೂ, ಸರಿಪಡಿಸಲು ಸಿಬ್ಬಂದಿ ಕೊರತೆಯೆಂದು, ವಿದ್ಯುತ್ ಅಭಾವವೆಂದು, ಕೊನೆಯಿಲ್ಲದ ಕಾರಣಗಳನ್ನು ನೀಡುತ್ತಿದ್ದರು.  ಇದೇ ರೀತಿ ನೀರಿನವರೂ, ನಗರ ಸಭೆಯವರೂ ಕೂಡ.  ಅನತಿ ದೂರದಲ್ಲಿದ್ದ ಇತರೆ ಕಾರ್ಖಾನೆಗಳಿಗೆ ಹರಿಯುವ ವಿದ್ಯುತ್, ನೀರು, ಇತರೆ ಮೂಲ ಸೌಕರ್ಯಗಳು ಇವರಿಗೆ ಮಾತ್ರ ಪದೇ ಪದೇ ತಡೆಯಾಗುತ್ತಿದ್ದವು.  ಪಕ್ಕದ ಕಾರ್ಖಾನೆಗಳ ಮಾಲೀಕರೊಂದಿಗಿನ ಮಾತಿನಲ್ಲಿ ಅವರಿಗೆ ತಿಳಿದ್ದಿದ್ದೇನೆಂದರೆ ವಿದ್ಯುತ್ತಿನವರಿಗೆ, ನೀರಿನವರಿಗೆ, ನಗರಸಭೆಯವರಿಗೆ ತಾವು ಪಾವತಿಸುವ ಬಿಲ್ಲು, ತೆರಿಯೊಂದಿಗೆ ಅಲ್ಲಿನ ಜನರಿಗೆ ಹೆಚ್ಚುವರಿಯಾಗಿ ಭಕ್ಷೀಸನ್ನು ನೀಡದಿರುವುದೇ ಮೂಲ ಕಾರಣವೆಂದು ತಿಳಿಯಿತು.

ವಿದ್ಯುತ್ತಿನವರಿಗೆ, ನೀರಿನವರಿಗೆ, ನಗರಸಭೆಯವರಿಗೆ ಭಕ್ಷೀಸನ್ನು ನೀಡಲು ಶುರುವಿಟ್ಟುಕೊಂಡರು.  ಆದರೆ ಸರ್ಕಾರಿ ನೌಕರರ, ರಾಜಕೀಯದವರನ್ನು ತೃಪ್ತಿಪಡಿಸಲಾದೀತೆ?  ಎಷ್ಟು ಕೊಟ್ಟರು ಸಾಲದೆಂಬಂತೆ ಹಪಹಪಿಸುವ ಜನರ ಕಂಡು ನಿತೇಶ ಶೆಟ್ಟಿಯವರಿಗೆ ರೋಸಿ ಹೋಗಿತ್ತು.

ಈ ನಡುವೆ ಅವರ ಕಾರ್ಖಾನೆಗೆ ಸರ್ಕಾರಿ ಇಲಾಖೆಯಿಂದ ತಿನಿಸು ತಪಾಸಣೆಗೆಂದು ಸಣ್ಣೇಗೌಡನೆಂಬ ಅಧಿಕಾರಿ ಬಂದರು.  ಸರ್ಕಾರಿ ನಿಯಮದಂತೆ ಎಲ್ಲವೂ ಸ್ವಚ್ಫವಾಗಿ ಶುಚಿಯಾಗಿದದ್ದು ಅವರ ಗಮನಕ್ಕೆ ಬಂತು.  ಭಕ್ಷೀಸಿಲ್ಲದೆ ಬರಿಗೈಯಲ್ಲಿ ಹಿಂದಿರುಗಬೇಕೆಂದು ಮನವರಿಕೆಯಾದಾಗ, ಯಾವುದೋ ಒಂದು ಸಣ್ಣ ತಪ್ಪು ಕಂಡು ಹಿಡಿದು ಅದನ್ನು ದೊಡ್ಡದಾಗಿ ಮಾಡಿ, ಕಾರ್ಖಾನೆಯ ಲೈಸನ್ಸ್‌ ಅನ್ನು ರದ್ದು ಪಡಿಸುವುದಾಗಿ ಹೆದರಿಸಿದರು.  ಆ ಕಾರಣವನ್ನು ಅಧಿಕಾರಿ ಬೇಕೆಂತಲೇ ನೀಡುತ್ತಿರುವುದು ಒಡೆಯರಿಗೂ ತಿಳಿದ್ದಿದ್ದರಿಂದ, ಅವರಿಗೆ ಅದರ ಒಳಗುಟ್ಟು ಅರ್ಥವಾಯಿತು.  ಅವರು ಮ್ಯಾನೇಜರ್‌ರನ್ನು ಕರೆದು ಒಂದಷ್ಟು ಭಕ್ಷೀಸು ನೀಡಿ ಅವರನ್ನು ಕಳುಹಿಸಬೇಕೆಂದು ತಿಳಿಸಿದರು.

ಭಕ್ಷೀಸನ್ನು ಪಡೆದ ಸಣ್ಣೇಗೌಡ, ಒಂದೈದು ಕೆ.ಜಿ ಚಾಕಲೇಟು ನೀಡಬೇಕೆಂದು ಆಗ್ರಹಿಸಿದರು.  ಚಾಕಲೇಟ್ ಕಾರ್ಖಾನೆಯಾದ್ದರಿಂದ ಅಲ್ಲಿ ಬರುವ ವಿದ್ಯುತ್ತಿನವರು, ನೀರಿನವರು, ನಗರಸಭೆಯವರ ಚಾಕಲೇಟಿನ ಕೋರಿಕೆ ಸಾಮಾನ್ಯವಾದದ್ದೇ.  ಇದನ್ನೆಲ್ಲ ನೋಡಿ ರೋಸಿ ಹೋಗಿದ್ದ ಒಡೆಯರು, ಮ್ಯಾನೇಜರರನ್ನು ಕರೆದು ಇದಕ್ಕೆ ಏನಾದರು ಉಪಾಯ ಹುಡುಕಬೇಕೆಂದು ಹೇಳಿದ್ದರು.
     *   *   *

ಮ್ಯಾನೇಜರ್‍ ಮಾಯಾಚಾರಿ ಹಲವು ತಿಂಡಿಗಳ ಕಾರ್ಖಾನೆಗಳಲ್ಲಿ ಪಳಗಿದ್ದ ವ್ಯಕ್ತಿ.  ಕಾರ್ಖಾನೆ ವಿಸ್ತಾರಗೊಂಡಾಗ ಸೇರಿಕೊಂಡಿದ್ದ ಈತ, ಬಹಳ ನಿಯತ್ತಾಗಿ ಕಾರ್ಮಿಕರಿಗೂ, ಒಡೆಯರಿಗೂ ಹತ್ತಿರವಾಗಿದ್ದ.

ಚಾಕಲೇಟ್ ಕಾರ್ಖಾನೆಯಲ್ಲಿ ಮುರಿದ ಚಾಕಲೇಟುಗಳು, ಕಸದಲ್ಲಿ ಬಿದ್ದ ಚೂರುಗಳನ್ನು, ಪಾಕ ಕೆಟ್ಟಿದ ಸಿಹಿಯನ್ನು ಮತ್ತು ತಿನ್ನಲು ಯೋಗ್ಯವಲ್ಲದ ಪದಾರ್ಥಗಳನ್ನು ಬಿಸಾಡದೇ ಅವನ್ನು ಹೊಸ ಮಾದರಿಯ ಚಾಕಲೇಟು ತಯಾರಿಸಲು ಮತ್ತು ಪ್ರಯೋಗ ಮಾಡಲು ಉಪಯೋಗಿಸಿ ಕೊಳ್ಳುತ್ತಿದ್ದರು.  ಈ ರೀತಿ ಉಪಯೋಗಿಸಿದ ಪದಾರ್ಥಗಳನ್ನು ಬಹಳ ಭದ್ರತೆಯಿಂದ ಪ್ರಾಣಿಗಳು ಸಹ ತಿನ್ನದಂತೆ ಎಚ್ಚರ ವಹಿಸುತ್ತಿದ್ದರು.  ಬಾಯ್ಲರಿನಲ್ಲಿ ಹೆಚ್ಚು ಉಷ್ಣದಿಂದ ಇವು ತಯಾರಾಗುತ್ತಿದ್ದು ಪ್ರಾಣಕ್ಕೇನು ತಕ್ಷಣ ತೊಂದರೆಯಾಗದಿದ್ದರು, ಬಹಳ ದಿನಗಳವರೆಗೆ ಹೆಚ್ಚು ಸೇವಿಸಿದಲ್ಲಿ ಮೂತ್ರ ಕೋಶ ತೊಂದರೆ, ಕರುಳು ಬೇನೆ ಕಟ್ಟಿಟ್ಟ ಬುತ್ತಿ.  ಆದರಿಂದಲೇ ಒಡೆಯರು ಅದನ್ನು ಕಸಕ್ಕೆ ಬಿಸಾಡಲು ಹಿಂಜರಿಯುತ್ತಿದ್ದರು.  ಕಸದಲ್ಲಿ ಹಸು, ನಾಯಿ, ಇತರೆ ಪ್ರಾಣಿಗಳು, ಪಕ್ಷಿಗಳು ಮತ್ತು ಕಸ ಆಯುವವರು ತಿಂದು ನೋಯಬಾರದೆಂಬುದು ಅವರ ಕಾಳಜಿ. ಒಂದೊಮ್ಮೆ ಚಾಕಲೇಟಿನಲ್ಲಿ ಬಳಸುವ ಗ್ಲೂಕೋಸಿನ ಡ್ರಮ್ಮಿನಲ್ಲಿ ಕಪ್ಪೆ ಸತ್ತಿದ್ದು, ಅದರಿಂದ ತಯಾರಿತ ಗೊಂಡ ಅಷ್ಟೂ ಚಾಕಲೇಟನ್ನು ಈ ಪ್ರಯೋಗಕ್ಕೆ ಉಪಯೋಗಿಸಿಕೊಂಡಿದ್ದರು. ಹೊಸ ಹೊಸ ಬಗೆಯ ಅಚ್ಚುಗಳು ಮತ್ತು ಆಕರ್ಷಕ ಪೊಟ್ಟಣಗಳು ಪ್ರತಿವರ್ಷ ಬಿಡುಗಡೆಗೊಳಿಸುತ್ತಿದ್ದರು. 
     *   *   *

ಮಾಯಾಚಾರಿ ಉಚಿತವಾಗಿ ಚಾಕಲೇಟು ಬೇಡುವ ಸರ್ಕಾರಿ ಜನಕ್ಕೆ ಇವನ್ನು ಹಂಚಿದರೆ ಸಂಭವಿಸುವ ನಷ್ಟದಲ್ಲಿ ಸ್ವಲ್ಪವಾದರೂ ನಿಲ್ಲುತ್ತದೆಂದು ಒಡೆಯರಿಗೆ ಸಲಹೆ ಇತ್ತ.  ಒಡೆಯರಿಗೂ ಇದು ಸರಿಯೆನಿಸಿತ್ತು.  ನಿಯತ್ತಿನ ಅಧಿಕಾರಿಗಳನ್ನು ಕಂಡರೆ ಅವರೇ ಸ್ವತಃ ಒಳ್ಳೆಯ ಚಾಕಲೇಟುಗಳನ್ನು, ಕಾಡುವ ವಿದ್ಯುತ್ತಿನ, ನೀರಿನ, ನಗರಸಭೆಯ ಅಧಿಕಾರಿಗಳಿಗೆ ಈ ಪ್ರಾಯೋಗಿಕ ಚಾಕಲೇಟುಗಳನ್ನು ನೀಡುವುದು ರೂಢಿಯಾಗಿತ್ತು.  ಅದಕ್ಕೆಂದೇ ವಿಶೇಷವಾದ ರಂಗು ರಂಗಿನ ಪೊಟ್ಟಣಗಳನ್ನು ಇಟ್ಟಿದ್ದರು.  ಪೊಟ್ಟಣ ಬಹಳ ಆಕರ್ಷಕವಾಗಿದ್ದು ಮನಸೂರೆಗೊಳ್ಳುವಂತಿತ್ತು.

ಈ ರೀತಿಯ ಚಾಕಲೇಟು ಒಬ್ಬರಿಗೆ ಒಂದು ಕೆ.ಜಿ. ಗಿಂತ ಹೆಚ್ಚು ನೀಡುತ್ತಿರಲಿಲ್ಲ.  ಸಣ್ಣೇಗೌಡರಿಗೂ ಒಂದು ಕೆ.ಜಿ. ಚಾಕಲೇಟ್ ನೀಡಿದರು.  ಸಣ್ಣೇಗೌಡರು ತೃಪ್ತಿಗೊಳ್ಳದೆ ಇನ್ನು ನಾಲ್ಕು ಕೆ.ಜಿ. ಉಚಿತವಾಗಿ ನೀಡಲೇಬೇಕೆಂದು ತಾಕೀತು ಮಾಡಿದರು.  ಒಡೆಯರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದ ಚಾಕಲೇಟು ನೀಡಬೇಕೆಂದು ಮಾಯಾಚಾರಿಗೆ ಹೇಳಿದರು.  ಮಾರುಕಟ್ಟೆಗೆ ಬಿಡುಗಡೆಮಾಡುತ್ತಿದ್ದ ಚಾಕಲೇಟಿನ ಪೊಟ್ಟಣಗಳು ಸಾಮಾನ್ಯವಾಗಿ ಕಂಡು, ಸಣ್ಣೇಗೌಡ ಮೊದಲು ನೀಡಿದ ಆಕರ್ಷಕ ಪೊಟ್ಟಣದ ಚಾಕಲೇಟುಗಳನ್ನೇ ನೀಡಬೇಕೆಂದು ಹಠ ಹಿಡಿದರು.  ಬೇರೆ ದಾರಿ ಕಾಣದೇ ಒಡೆಯರು ಐದು ಕೆ.ಜಿ. ಪ್ರಯೋಗದ ಚಾಕಲೇಟನ್ನು ಆಕರ್ಷಕ ಪೊಟ್ಟಣಗಳಲ್ಲಿ ಸಣ್ಣೇಗೌಡರಿಗೆ ನೀಡಿದರು.

ಸಂತುಷ್ಟರಾದ ಸಣ್ಣೇಗೌಡರು ಇವರಿಗೆ "ಎಲ್ಲ ಸರಿಯಾಗಿದೆ" ಎಂದು ಪತ್ರನೀಡಿ ಮನೆಗೆ ನಡೆದರು.  ಅಂದು ಅವರ ಮನೆಯಲ್ಲಿ ಮಕ್ಕಳು ಮೊಮ್ಮಕಳೊಂದಿಗೆ ಚಾಕಲೇಟನ್ನು ಹಂಚಿ ತಿಂದಿದ್ದರು.  ನಾಲಿಗೆಗಿಂತ ಪೊಟ್ಟಣದ ಆಕರ್ಷಕ ರಂಗು ಎಲ್ಲರನ್ನು ಸೆಳೆದಿತ್ತು.  ಸಿಹಿಯಾಗಿದ್ದಿದ್ದರಿಂದ ಎಲ್ಲರಿಗೂ ಸಂತಸದಿಂದ ಸವಿದರು.  ದಿನ ಕೆಲಸಕ್ಕೆ ಹೊರಡುವ ಮುನ್ನ ಕೆಲ ಚಾಕಲೇಟನ್ನು ಸಣ್ಣೇಗೌಡರು ಕಿಸೆಯಲ್ಲಿ ತುಂಬಿಕೊಂಡು ದಾರಿಯುದ್ದಕ್ಕೂ ತಿಂದು ಸಂತಸಪಟ್ಟರು.

ಐದು ಕೆ.ಜಿ. ಚಾಕಲೇಟು ಮುಗಿಯುತ್ತಿದ್ದಂತೆ, ಸಣ್ಣೇಗೌಡರಿಗೆ ಹೊಟ್ಟೆಯಲ್ಲಿ ಏನೋ ತೊಂದರೆಯಾದಂತೆ ಕಾಣತೊಡಗಿತು.  ಮೊದಮೊದಲು ಅಜೀರ್ಣತೆಯಿಂದಾಗಿದೆಯೆಂದು ತಿಳಿದರೂ, ಅದು ಬಹಳ ದಿನಗಳವರೆಗೆ ಮುಂದುವರೆಯಿತು.  ವೈದ್ಯರಲ್ಲಿ ತೋರಿಸಿದರು.  ವೈದ್ಯರು ಇವರ ಕೆಲಸ, ಆದಾಯ, ಇತ್ಯಾದಿಗಳನ್ನು ತಿಳಿದರು. ಹೊಟ್ಟೆಯಲ್ಲಿ ಇವರಿಗೆ ತೊಂದರೆಯಿದ್ದರೂ ಹೊಟ್ಟೆಯೊಂದಿಗೆ, ತಲೆಯ ಕ್ಷ-ಕಿರಣ ತರಬೇಕೆಂದೂ, ರಕ್ತ ಪರೀಕ್ಷೆ ಮಾಡಬೇಕೆಂದು ಆಗ್ರಹಿಸಿದರು.  ಸಣ್ಣೇಗೌಡರಿಗೆ ತಲೆಯ ಕ್ಷ-ಕಿರಣ ಏತಕ್ಕೆಂದು ಕೇಳಿದರು.  ಅದಕ್ಕೆ ವೈದ್ಯರು "ನೋಡ್ರಿ ಹೊಟ್ಟೆನ ಹತೋಟಿಯಲ್ಲಿ ಇಡೋದು, ನಿಮಗೆ ಹಸಿವು, ನೋವನ್ನು ತಿಳಿಸುವುದು ಮೆದುಳು ತಾನೆ?"  ಅದಕ್ಕೇ ಮೆದುಳಿನ ಕ್ಷ-ಕಿರಣ ಕೇಳಿದ್ದು ಎಂದು ಗುಡುಗಿದರು.

ವೈದ್ಯರಿಗೂ ಪಕ್ಕದಲ್ಲಿನ ಕ್ಷ-ಕಿರಣ ಮತ್ತು ಔಷಧಿ ಅಂಗಡಿಯವರೊಂದಿಗೆ ಒಳ ಒಪ್ಪಂದ ಏರ್ಪಾಟುಗೊಂಡಿತ್ತು.  ವೈದರು ಕಳುಹಿಸುವ ರೋಗಿಗಳಿಂದ ಬರುವ ಆದಾಯದಲ್ಲಿ ಕ್ಷ-ಕಿರಣ ಮತ್ತು ಔಷಧಿ ಅಂಗಡಿಯವರು ಶೇ.೨೫ ರಷ್ಟು ಹಣವನ್ನು ವೈದ್ಯರಿಗೆ ನೀಡುವುದೆಂದು ಒಪ್ಪಂದವಾಗಿತ್ತು.

ಸಣ್ಣೇಗೌಡರು ಬೇರೆ ದಾರಿ ಕಾಣದೇ ತಲೆ ಮತ್ತು ಹೊಟ್ಟೆಯ ಕ್ಷ-ಕಿರಣ ಮತ್ತು ರಕ್ತ ಪರೀಕ್ಷೆಯ ವರದಿ ತಂದು ಕೊಟ್ಟರು.  ಚಾಕಲೇಟಿನಲ್ಲಿ ಇದ್ದ ವಸ್ತುಗಳು ಸಣ್ಣೇಗೌಡರ ಹೊಟ್ಟೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದವು.  ಬೇಕೆಂತಲೇ ವೈದ್ಯರು ಹೆಚ್ಚು ಹಣದ ಔಷಧಿ ಬರೆದುಕೊಟ್ಟಿದ್ದರು.  ಸಣ್ಣೇಗೌಡರು ಔಷಧಿಗಳನ್ನು ಕೊಳ್ಳಲು ಹಣವೇ ಉಳಿದಿರಲಿಲ್ಲ.  ತಂದಿದ್ದ ಅಷ್ಟು ಹಣ ಕ್ಷ-ಕಿರಣ ಅಂಗಡಿಯವನಿಗೆ ಕೊಡಬೇಕಾಯಿತು.  ಮನೆಯ ಹತ್ತಿರ ಔಷಧಿ ಕೊಳ್ಳೋಣವೆಂದು ತನ್ನ ಮಗನೊಂದಿಗೆ ಮನೆಗೆ ನಡೆದರು.  ಮನೆಯ ಹತ್ತಿರ ಹತ್ತಾರು ಔಷಧಿ ಅಂಗಡಿಗಳಲ್ಲಿ ಹುಡುಕಿದರೂ ಆ ಔಷಧಿ ದೊರೆಯದಿದ್ದಾಗ ಸಣ್ಣೇಗೌಡರ ಮಗ, ಆಸ್ಪತ್ರೆಯ ಹತ್ತಿರ ಇದ್ದ ಔಷಧಿ ಅಂಗಡಿಗೆ ಬಂದು ಕೊಂಡು ಹೋದ.

ಔಷಧಿಗಳನ್ನು ಕೆಲ ದಿನಗಳು ತಿಂದ ನಂತರ ಸಣ್ಣೇಗೌಡರು ಮೊದಲಿನಂತಾದರು!  ಅವರ ಅನಾರೋಗ್ಯದ ಗುಟ್ಟು ಮತ್ತು ವೈದರಲ್ಲಿ ಅವರು ತೆತ್ತ ಹೆಚ್ಚು ಮೊತ್ತ ಅವರ ಅರಿವಿಗೆ ಬಾರದಂತೆ ಜೀವನ ಸಾಗಿತ್ತು.
     *****
Read more...

Saturday, May 17, 2014

Posted by ಬಡಗಿ | 0 comments

ಜೈ ತೆಲಂಗಾಣ

ಶನಿವಾರ ರಾತ್ರಿ "ಜನ್ಮಭೂಮಿ ಎಕ್ಸ್‌ಪ್ರೆಸ್" ರೈಲು ಮಧ್ಯರಾತ್ರಿ ಹನ್ನೆರಡಕ್ಕೆ ಇದ್ದರೂ ಮನೆಯನ್ನು ರಾತ್ರಿ ಹತ್ತು ಘಂಟೆಗೆ ಬಿಟ್ಟಿದ್ದ.  ತನ್ನನ್ನು ಬೀಳ್ಕೊಡಲು ಮಗಳು, ಹೆಂಡತಿ, ತಂದೆ, ತಾಯಿ, ಅತ್ತೆ ಮತ್ತು ಮಾವ ಬಂದಿದ್ದರು.  ರೈಲು ಹನ್ನೆರಡಕ್ಕೆ ಬರುವುದಿರುವುದರಿಂದ ಅವರನ್ನೆಲ್ಲ ನಿಲ್ದಾಣದಿಂದ ಮನೆಗೆ ಬೇಗ ಹೊರಡಿ ಎಂದು ಬೇಡಿಕೊಂಡರೂ ಅವರು ಹೊರಡಲಿಲ್ಲ.  ರೈಲು ಹನ್ನೊಂದು ಮುಕ್ಕಾಲಿಗೆ ತಲುಪಿ ಬೋಗಿಯೊಳಗೆ ನಿಂತು ತನ್ನ ಬಳಗವನ್ನೊಮ್ಮೆ ನೋಡಿದ, ಎಲ್ಲರ ಕಣ್ಣಲ್ಲೂ ನೀರು, ನಾಲ್ಕು ವರ್ಷದ ಮಗಳು "ಅಪ್ಪಾ!  ಬರುವಾಗ ಬಾರ್ಬಿ ಗೊಂಬೆಯನ್ನು ತರು" ಎಂದು ಬೇಡಿಕೊಂಡಳು.  ಮಗಳಿಗೆ ಈಗಾಗಲೇ ಬುದ್ದಿ ಬಂದಿತ್ತು.  ಗುಂಟೂರಿನ ಸಂತೆಯಲ್ಲಿ ಅವಳಿಗೆ ನಕಲಿ ಬಾರ್ಬಿ ಗೊಂಬೆ ಕೊಡಿಸಲು ಹೋಗಿ ಅವಳು ಅದನ್ನು ಒಪ್ಪಿರಲಿಲ್ಲ.  ಅಂದವಾದ ಅಸಲಿ "ಬಾರ್ಬಿ" ಗೊಂಬೆ ಎಲ್ಲಿ ನೋಡಿದ್ದಳೋ?...  ಅಷ್ಟಾಗಿ ಅವನು ಬೇರೆ ದೇಶಕ್ಕೇನು ಹೊರಟಿರಲಿಲ್ಲ.  ಅವನು ಹೊರಟಿದ್ದು ಹೈದರಾಬಾದಿಗೆ.  ಗುಂಟೂರಿನಿಂದ ಹೈದರಾಬಾದು ಏಳೆಂಟು ಘಂಟೆಯ ಪ್ರಯಾಣ.  ಅವನು ಹೈದರಾಬಾದಿಗೆ ಹೋಗಲು ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ.

          *    *    *

ಗುಂಟೂರಿನ ಮೆಣಸಿನಕಾಯಿ ಮಂಡಿಯಲ್ಲಿ ವ್ಯಾಪಾರಿ ರಾಮಿರೆಡ್ಡಿಯವರ ಖಾಸಗಿ ಸಂಸ್ಥೆಯಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಕಿಟ್ಟಿ.  ಸಂಸ್ಥೆಯಲ್ಲಿ ಮುವತ್ತು ನಲ್ವತ್ತು ಜನ ಕೆಲಸಮಾಡುತ್ತಿದ್ದರು.  ಹತ್ತು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಅವನ ಕೈ ಸೇರುತ್ತಿದ್ದ ಸಂಬಳ ಮಾತ್ರ ತಿಂಗಳಿಗೆ ಹತ್ತು ಸಾವಿರ ದಾಟಿರಲಿಲ್ಲ.  ಮದುವೆಗೆ ಮುಂಚೆ ಬರುತ್ತಿದ್ದ ಸಂಬಳ ಅವನ ಸಂಸಾರಕ್ಕೆ ಸರಿ ಹೋಗುತ್ತಿತ್ತು.  ಮದುವೆಯ ನಂತರ ಹೆಂಡತಿ, ಮಕ್ಕಳನ್ನು ಸಾಕಲು ಬಹಳ ಕಷ್ಟದಾಯಕವೆಂದು ಅರಿತಿದ್ದ ಅವನು ಕೆಲಸ ಮಾಡುತ್ತಿದ್ದ ಹುಡುಗಿಯನ್ನೇ ಮದುವೆಯಾಗುವುದೆಂದು ತನ್ನ ಕಷ್ಟವನ್ನು ಅಪ್ಪ ಅಮ್ಮರ ಬಳಿ ಹೇಳಿಕೊಂಡಿದ್ದನು.  ಮಧ್ಯಮವರ್ಗದವರಾದರಿಂದ ಅಪ್ಪ ಅಮ್ಮ ಅವನಿಗೆ ಕೆಲಸಕ್ಕೆ ಹೋಗುವ ಹುಡುಗಿಯನ್ನೇ ಮದುವೆ ಮಾಡಿದ್ದರು.  ಮೊದಲನೇ ಮಗು ಹುಟ್ಟಿದ ನಂತರ, ಹೆಂಡತಿಯ ಕೆಲಸದಲ್ಲಿ ಉಪಟಳ ಕೊಡುತ್ತಿದ್ದರಿಂದ, ಹೆಂಡತಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಳು.

ಕಿಟ್ಟಿ ಈಗ ಹೆಚ್ಚಿನ ದುಡ್ಡು ಸಂಪಾದಿಸುವ ಯೋಚನೆಯಲ್ಲಿ ಮುಳುಗಿದ್ದ.  ಗುಂಟೂರಿನಲ್ಲಿ ಮೆಣಸಿನಕಾಯಿ ಮಂಡಿ ಬಿಟ್ಟರೆ ಬೇರೆ ಹೆಚ್ಚು ಉದ್ಯಮಗಳು ಕಾಣಸಿಗವು.  ಒಂದೆರಡು ಆಸ್ಪತ್ರೆಗಳಲ್ಲಿ, ಹೋಟೆಲುಗಳಲ್ಲಿ ಈಗಾಗಲೇ ಲೆಕ್ಕಿಗನ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದರೂ ಯಾರು ಹತ್ತು ಸಾವಿರವನ್ನು ಮೀರಿದ ಸಂಬಳವನ್ನು ಕೊಡುವ ಸುದ್ದಿಯನ್ನು ಕೊಟ್ಟಿರಲಿಲ್ಲ.  ಇದೇ ವೇಳೆಗೆ ಅವನ ಪಕ್ಕದ ಮನೆಯ ಗೆಳೆಯ ವೆಂಕಟೇಶ ಹೈದರಾಬಾದಿನಿಂದ ಗುಂಟೂರಿಗೆ ಬಂದಿದ್ದ.  ಅವನೊಂದಿಗೆ ತನ್ನ ಕಷ್ಟ ಸುಖಗಳನ್ನು ಹಂಚಿಕೊಳ್ಳುತಿರಲು ವೆಂಕಟೇಶ ತಾನು ಕೆಲಸ ಮಾಡುತ್ತಿರುವ ಬಿ.ಪಿ.ಓ ಸಂಸ್ಥೆಯಲ್ಲಿ ಹೊಸದೊಂದು ಪ್ರಾಜೆಕ್ಟ್‌ಗಾಗಿ ಸಂದರ್ಶನಗಳು ನಡೆಯುತ್ತಿದ್ದು ಅಲ್ಲಿ ಪ್ರಯತ್ನಿಸಬೇಕೆಂದು ತಿಳಿಸಿ, ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಹಾಗು ನಡೆಯುವ ರೀತಿಯನ್ನು ತಿಳಿ ಹೇಳಿದ.  ಸಂಬಳ ಹದಿನೈದು ಸಾವಿರ ಅಪೇಕ್ಷಿಸಬಹುದೆಂದು ತಿಳಿಸಿದ.

ತಿಂಗಳಿಗೆ ಹದಿನೈದು ಸಾವಿರ ಸಂಬಳವೆಂದ ಕೂಡಲೇ ಕಿಟ್ಟಿಯಲ್ಲಿ ಸಂಚಲನವುಂಟಾಗಿ ವೆಂಕಟೇಶನೊಂದಿಗೆ ಸಂದರ್ಶನಕ್ಕಾಗಿ ಹೈದರಾಬಾದಿಗೆ ಹೊರಟ.  ಈಗಾಗಲೇ ಕೆಲಸಕ್ಕಾಗಿ ಪ್ರಯತ್ನ ಪಡುತ್ತಿದ್ದುದರಿಂದ ಅವನು ಸಂದರ್ಶನಗಳನ್ನು ಎದುರಿಸಲು ಪರಿಣತನಾಗಿದ್ದ.  ಹದಿನೈದು ಸಾವಿರ ಸಂಬಳದ ಕೆಲಸವನ್ನು ಪಡೆಯಲೇಬೇಕೆಂಬ ಹಂಬಲದಿಂದ ಪರೀಕ್ಷೆ ಮತ್ತು ಸಂದರ್ಶನವನ್ನು ಉತ್ತಮವಾಗಿ ನೀಡಿದ್ದ.  ಫಲಿತಾಂಶಗಳನ್ನು ಒಂದೆರಡು ದಿನಗಳಲ್ಲಿ ಅಲೆಯುಲಿ(ಮೊಬೈಲ್)ಯ ಮುಖಾಂತರ ತಿಳಿಸುವುದಾಗಿ ಹೇಳಿದ್ದರಿಂದ, ಅವನು ರಾತ್ರಿ ಗುಂಟೂರಿಗೆ ಹೊರಡುವ ಜನ್ಮಭೂಮಿ ಎಕ್ಸ್‌ಪ್ರೆಸ್ ರೈಲು ಹತ್ತಿದ.  ಎರಡು ದಿನದ ನಂತರ ಆ ಸಂಸ್ಥಯಿಂದ ಕರೆಬಂದು ಇನ್ನು ಹದಿನೈದು ದಿನಗಳಲ್ಲಿ ಕೆಲಸಕ್ಕೆ ಸೇರ್ಪಡೆಯಾಗಬೇಕೆಂದು, ಇತರೆ ವಿಷಯಗಳನ್ನು ಮಿಂಚೆ (ಈ ಮೇಲ್)ಯ ಮೂಲಕ ತಿಳಿಸಲಾಗಿದೆಯೆಂದರು.  ಕಿಟ್ಟಿಗೆ ಈ ಸುದ್ದಿಯಿಂದ ಅತ್ಯಾನಂದವಾಗಿ ಮೊದಲಿಗೆ ವೆಂಕಟೇಶನಿಗೆ ಕರೆ ಮಾಡಿ ತಿಳಿಸಿದ.  ವೆಂಕಟೇಶನು ಹೈದರಾಬಾದಿನಲ್ಲಿ ತಾನಿರುವ ಕೋಣೆಯಲ್ಲೇ ತಂಗಬಹುದೆಂದು ಬಾಡಿಗೆಯನ್ನು ಹಂಚಿಕೊಂಡರಾಯಿತೆಂದು ತಿಳಿಸಿದ.  ಮನೆಯಲ್ಲಿ ಅಪ್ಪ, ಅಮ್ಮ ಮತ್ತು ಹೆಂಡತಿಗೆ ವಿಷಯ ತಿಳಿಸಿ ಹೈದರಾಬಾದಿಗೆ ಹೊರಡಲು ಅನುವಾದ.

          *    *    *

ವೆಂಕಟೇಶ ಕಛೇರಿಗೆ ಮತ್ತು ಗುಂಟೂರಿಗೆ ಹೋಗಿ ಬರಲು ಅನುಕೂಲವಾಗುವಂತೆ ಬೋರಿಬಂಡಿಯಲ್ಲಿ ಕೋಣೆ ಬಾಡಿಗೆಗೆ ಪಡೆದಿದ್ದ.  ಬೋರಿಬಂಡಿಯಿಂದ ಕಛೇರಿಗೆ ಮೂರು ಕಿಲೋಮೀಟರ್‍, ಐದಾರು ಜನರನ್ನು ತುಂಬಿಸಿಕೊಂಡು ಹೋಗುವ ಆಟೋದಲ್ಲಿ ಹತ್ತು ರೂಪಾಯಿಯ ವೆಚ್ಚ.  ಬಸ್ಸಿನಲ್ಲಿ ನಾಲ್ಕು ರೂಪಾಯಿ ಆದರೆ ಬಸ್ಸುಗಳು ವಿರಳ.  ಕಿಟ್ಟಿಗಾಗಿ ವೆಂಕಟೇಶ ತನ್ನ ಕೋಣೆಯ ಒಂದು ಭಾಗವನ್ನು ಸಜ್ಜುಗೊಳಿಸಿದ್ದ.  ಕಿಟ್ಟಿ ತನಗೆ ಕೊಟ್ಟ ಜಾಗದಲ್ಲಿ ಬಟ್ಟೆಯ ಚೀಲವನ್ನು ಇರಿಸಿ ಸ್ನಾನ ಮಾಡಿ ದೇವರಿಗೆ ನಮಿಸಿ ತಿಂಡಿ ತಿನ್ನಲು ವೆಂಕಟೇಶನೊಂದಿಗೆ ಕರ್‍ರಿ ಪಾಯಿಂಟ್‌ಗೆ ಹೋದ.  ಗುಂಟೂರಿನಲ್ಲಿ ಅಮ್ಮ ಅಡುಗೆ ಮಾಡಿ ಬಡಿಸುತ್ತಿದುದು ನೆನಪಿಗೆ ಬಂತು.  ಕಛೇರಿಯಲ್ಲಿ ನಡೆದುಕೊಳ್ಳಬೇಕಾದ ರೀತಿ ರಿವಾಜುಗಳನ್ನೆಲ್ಲ ವೆಂಕಟೇಶ ವಿವರಿಸಿದ.  ಭಾನುವಾರವಾದ್ದರಿಂದ ವೆಂಕಟೇಶ ಇತರ ಗೆಳೆಯರೊಂದಿಗೆ ಕುಡಿಯಲು ಬಾರಿಗೆ ಹೋಗಿದ್ದ.  ಕಿಟ್ಟಿ ಬೋರಿಬಂಡಿಯ ಸುತ್ತ ಮುತ್ತ ಸುತ್ತಾಡಿ ಬಂದ.  ಕೋಣೆಗೆ ಬಂದ ಕಿಟ್ಟಿಗೆ ಕೋಣೆಯಲ್ಲಿ ವಿಪರೀತ ಜಿರಲೆಗಳು ಕಣ್ಣಿಗೆ ಬಿದ್ದವು.  ಬಚ್ಚಲಿನಿಂದ ಬರುತ್ತಿದ್ದ ದುರ್ನಾತ ತಡೆಯಲಾಗದೆ ಅಂಗಡಿಯಿಂದ ಬ್ಲೀಚಿಂಗ್ ಪೌಡರ್‍ ತಂದು ಬಚ್ಚಲನ್ನು ತಿಕ್ಕಿ ಸ್ವಚ್ಫಗೊಳಿಸಿದ.  ಗುಂಟೂರಿನಲ್ಲಿ ತನ್ನ ಹೆಂಡತಿ ಮನೆಯನ್ನು ಸ್ವಚ್ಫವಾಗಿಡುತ್ತಿದ್ದುದನ್ನು ನೆನಪಿಸಿಕೊಂಡ.  ಕೋಣೆಯಲ್ಲಿ ಕಣ್ಣಿಗೆ ಬಿದ್ದ ಜಿರಲೆಗಳನ್ನು ಪೊರಕೆಯಿಂದ ಚಚ್ಚಿ ನೆಲವನ್ನು ಒರೆಸಿ ಸ್ವಚ್ಫಮಾಡಿದ.

ಮಾರನೆಯ ದಿನ ಕಿಟ್ಟಿ ತನ್ನ ಹೊಸ ಕೆಲಸಕ್ಕೆ ವೆಂಕಟೇಶನೊಂದಿಗೆ ಹಾಜರಾದ.  ಕಿಟ್ಟಿಯ ಒಂದೆರಡು ವಾರ ತರಬೇತಿಯಲ್ಲಿಯೇ ಕಳೆಯಿತು.  ಕಿಟ್ಟಿ ಚುರುಕಿನಿಂದ ಕೆಲಸವನ್ನು ಕಲಿತು ತಂಡ ನಾಯಕನ ಪ್ರಶಂಸೆಗೆ ಪಾತ್ರನಾಗಿದ್ದ.  ಒಂದು ತಿಂಗಳು ಕಳೆಯುತ್ತಿದ್ದಂತೆ ಸಂಬಳ ಹದಿನೈದು ಸಾವಿರ ಕೈ ಸೇರಿತು.  ವೇತನ ಪಟ್ಟಿ ಪರಿಶೀಲಿಸಲಾಗಿ ಅದರಲ್ಲಿ ಪ್ರಾವಿಡೆಂಟ್ ಫಂಡ್ ಮತ್ತು ಇತರೆ ಸವಲತ್ತುಗಳ ಸಂಸ್ಥೆಯ ಕಾಣಿಕೆ ಏನು ಇರಲಿಲ್ಲ.  ಅದರ ಬಗ್ಗೆ ವಿಚಾರಿಸಲಾಗಿ ಆ ಸವಲತ್ತುಗಳು ಬೇಕಾದಲ್ಲಿ ತನ್ನ ಹದಿನೈದು ಸಾವಿರದ ಸಂಬಳದಿಂದ ಕಡಿತಗೊಳಿಸಿ ಕೊಡುವುದಾಗಿ ತಿಳಿಸಿದರು.  ಕಿಟ್ಟಿಗೆ ತನ್ನ ಗುಂಟೂರಿನ ಸಂಸ್ಥೆಯಲ್ಲಿನ ಸವಲತ್ತುಗಳು ಹಾಗೂ ಸೌಲಭ್ಯಗಳೆಲ್ಲ ಸೇರಿ ಒಟ್ಟು ಹನ್ನೆರಡು ಸಾವಿರದವರೆಗೆ ಆಗುತ್ತಿತ್ತೆಂದು ನೆನಪಾಗುತ್ತದೆ.   ಗುಂಟೂರಿನ ಸಂಸ್ಥೆಯಲ್ಲಿ ಅವನು ರಾಜನಂತಿದ್ದ.  ಕೇಳಿದಾಗ ಟೀ, ಬೇಕೆಂದಾಗ ಸ್ವಂತ ಕೆಲಸಕ್ಕಾಗಿ ಹೊರಗೆ ಹೋಗಿ ಬಂದರೂ ಯಾರು ಕೇಳುವವರಿಲ್ಲ.  ಪೂರ್ತಿ ದಿನ ಕಛೇರಿಯಲ್ಲೇ ಇರಬೇಕೆಂದೇನು ಇರಲಿಲ್ಲ.  ರಾಮಿರೆಡ್ಡಿಯವರ ನಂಬಿಕೆಗೆ ಪಾತ್ರನಾಗಿದ್ದರಿಂದ ಕೇಳುವವರೂ ಯಾರು ಇರಲಿಲ್ಲ.  ಇಲ್ಲಿ ದಿನಕ್ಕೆ ಒಂಭತ್ತು ಘಂಟೆ ಕೆಲಸ.  ಬೆನ್ನ ಹಿಂದೆಯೇ ಇರುತ್ತಿದ್ದ ತಂಡ ನಾಯಕ.  ಟೀ ತಯಾರಿಸಿದ ಪಾತ್ರೆ ತೊಳೆದಾಗ ಹೋಗುತ್ತಿದ್ದ ನೀರಿನಂತಿರುವ ಯಂತ್ರದ ಟೀ ವಾಕರಿಕೆ ಬರಿಸುವಂತಿತ್ತು. 

ಮೊದಲನೆಯ ಸಂಬಳವಾದ್ದರಿಂದ ಕಿಟ್ಟಿ ವೆಂಕಟೇಶನಿಗೆ ಒಂದು ಬೀರನ್ನು ಕೊಡಿಸಿದ.  ಬೀರು ಕುಡಿದು ವೆಂಕಟೇಶ ನಿದ್ರೆಗೆ ಶರಣಾಗಿದ್ದ.  ಕಿಟ್ಟಿ ತನ್ನ ಖರ್ಚು ವೆಚ್ಚಗಳನ್ನೆಲ್ಲ ಲೆಕ್ಕ ಹಾಕತೊಡಗಿದ.  ವೆಂಕಟೇಶನ ಕೋಣೆಯ ಬಾಡಿಗೆ ಮೂರು ಸಾವಿರ, ಇಬ್ಬರೂ ಹಂಚಿಕೊಳ್ಳಬೇಕಾದ್ದರಿಂದ ಇವನ ಬಾಬ್ತು ಒಂದೂವರೆ ಸಾವಿರ, ಆಟೋ ಖರ್ಚು ಐದು ನೂರು ರೂಪಾಯಿ, ಟೀ, ತಿಂಡಿ ಮತ್ತು ಊಟಕ್ಕಾಗಿ ಎರಡು ಸಾವಿರ, ಗುಂಟೂರಿಗೆ ಮೊಬೈಲ್ ಕರೆ ಖರ್ಚು ಇನ್ನೂರು ರೂಪಾಯಿ, ಇತರೆ ಖರ್ಚು ಮುನ್ನೂರು.  ತನ್ನ ಒಟ್ಟು ಖರ್ಚು ನಾಲ್ಕೂವರೆ ಸಾವಿರ.  ಗುಂಟೂರಿನಲ್ಲಿರುವಾಗ ಅವನಿಗಾಗಿ ಆಗುತ್ತಿದ್ದ ಖರ್ಚು ಐನೂರು ರೂಪಾಯಿ ಮೀರುತ್ತಿರಲಿಲ್ಲ.  ಹೈದರಾಬಾದಿಗೆ ಬಂದು ಅವನು ಲಾಭಾವಾಗಿದ್ದೆಂದರೆ ಒಂದು ಸಾವಿರ ರೂಪಾಯಿ ಮತ್ತು ಅವನ ಗುಂಟೂರಿನ ಊಟದ ಖರ್ಚು.  ಹೆಚ್ಚಿನ ಒಂದು ಸಾವಿರ ರೂಪಾಯಿಗಾಗಿ ಕುಟುಂಬವನ್ನು ಬಿಟ್ಟು ಒಬ್ಬಂಟಿಗನಾಗಿ ಇಷ್ಟು ಶ್ರಮಪಡಬೇಕಾದ ತನ್ನ ಮೂರ್ಖತನಕ್ಕೆ ಬೇಸತ್ತು ರಾತ್ರಿ ನಿದ್ರೆ ಬರಲಿಲ್ಲ.

ಬೆಳಗ್ಗೆ ಕಛೇರಿಗೆ ಹೊರಡುವಾಗ ಯಾವ ಯಾವ ಖರ್ಚು ಕಡಿಮೆ ಮಾಡಬಹುದೆಂದು ಯೋಚಿಸ ತೊಡಗಿದ.  ದಿನಕ್ಕೆ ಮೂರು ಟೀ ಬದಲಾಗಿ ಒಂದೇ ಟೀ ಕುಡಿಯುವುದು, ಆಟೋ ಬದಲು ನಡೆದೇ ಹೋಗಿ ಬರುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಮತ್ತು ಹಣವೂ ಉಳಿಯುವುದು, ಗುಂಟೂರಿಗೆ ದಿನಾಲೂ ಕರೆ ಮಾಡುವ ಬದಲು ದಿನ ಬಿಟ್ಟು ದಿನ ಕರೆ ಮಾಡುವುದು....... ಹೀಗೆಲ್ಲ ಉಳಿಸಿದರೂ ಏಳರಿಂದ ಎಂಟು ನೂರು ರೂಪಾಯಿ ಹೆಚ್ಚಾಗಿ ಉಳಿಸಲು ಆಗುತ್ತಿತ್ತು.  ಹೀಗೆ ದಾರಿಯಲ್ಲಿ ದಿನಾ ನಡೆದು ಬರುವಾಗ ಅವನು "ಆರ್ಚಿಸ್ ಗ್ಯಾಲರಿ" ಅಂಗಡಿಯ ಮೂಲಕ ಹಾದು ಹೋಗುತ್ತಿದ್ದ.  ಆ ಅಂಗಡಿಯಲ್ಲಿ ಇರುತ್ತಿದ್ದ ಬಾರ್ಬಿ ಗೊಂಬೆಯನ್ನು ನೋಡಿ ತನ್ನ ಮಗಳಿಗೆ ಒಂದು ದಿನ ಗೊಂಬೆ ತೆಗೆದುಕೊಂಡು ಹೋಗಬೇಕೆಂದುಕೊಳ್ಳುತ್ತಿದ್ದ.

          *    *    *

ಆ ಸಂಸ್ಥೆಯಲ್ಲಿ ಇನ್ನು ಸಂದರ್ಶನಗಳು ನಡೆಯುತ್ತಿದ್ದವು.  ಸಂಸ್ಥೆಯ ವ್ಯವಸ್ಥಾಪಕರು ಉದ್ಯೋಗಿಗಳಿಗೆ ನಿರಂತರ ಕೆಲಸ ಕೊಡಲು ಸಾಧ್ಯವಾಗುವಂತೆ ಹೊರದೇಶಗಳಿಂದ ಅನೇಕ ಗುತ್ತಿಗೆ ಪಡೆಯುತ್ತಿದ್ದರು.  ಸಂಸ್ಥೆ ಬೆಳೆಯುತ್ತಿದ್ದಂತೆ ಇರುವ ನೌಕರರಿಗೆ ಬೇಕಾಗುವಷ್ಟು ಕೆಲಸದ ಗುತ್ತಿಗೆ ಪಡೆಯುವುದು ಕಷ್ಟಸಾಧ್ಯವಾಗುತ್ತಿತ್ತು.  ಹೀಗಿರಲಾಗಿ ಸಂಸ್ಥೆಯ ವ್ಯವಸ್ಥಾಪಕರು ಹರಸಾಹಸ ಮಾಡಿ ಅಮೆರಿಕೆಯ ಒಂದು ಪ್ರಖ್ಯಾತ ದತ್ತ ಸಂಯೋಜಕ ಸಂಸ್ಥೆಯ ಕೆಲಸವನ್ನು ಮಾಡಿಕೊಡಲು ಗುತ್ತಿಗೆಯನ್ನು ಪಡೆದರು.  ಗುತ್ತಿಗೆಯ ಪ್ರಕಾರ ಹೈದರಾಬಾದಿನ ಸಂಸ್ಥೆಯು ಐವತ್ತು ನುರಿತ ಜನರನ್ನು ಈ ಕೆಲಸಕ್ಕೆ ನೇಮಿಸಬೇಕು.  ಅಮೇರಿಕೆಯ ನಿರ್ದೇಶಕರಲ್ಲಿ ಒಬ್ಬರಾರ ಸ್ಟೀವನ್‌ರವರು ಹೈದರಾಬಾದಿಗೆ ಬಂದು ಕೆಲಸದ ವ್ಯವಸ್ಥೆಯ ತಪಶೀಲು ಮಾಡಿದ ನಂತರವಷ್ಟೆ ಗುತ್ತಿಗೆ ನೀಡಲಾಗುವುದೆಂದು ನಿಬಂಧನೆಗಳು ಏರ್ಪಟ್ಟವು.  ಕಿಟ್ಟಿ ಮಾಡುತ್ತಿದ್ದ ಕೆಲಸ ಮುಗಿಯುತ್ತಾ ಬಂದಿದುದರಿಂದ ಅವನು ಮತ್ತು ಇತರ ಒಂಭತ್ತು ಮಂದಿ ನುರಿತ ಕೆಲಸಗಾರರನ್ನು ಈ ಕೆಲಸಕ್ಕೆ ನೇಮಿಸಲಾಯಿತು.  ಇತರೆ ನಲವತ್ತು ಮಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಿತು.

ಅದಾಗಲೇ ಹೈದರಾಬಾದಿನಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟ ನಡೆಯುತ್ತಿದ್ದವು.  "ತೆಲಂಗಾಣ ಬಂದ್" ಎಂದು ಒಂದು ದಿನ ಕಿಟ್ಟಿ ಮುನ್ನೆಚ್ಚರಿಕಾ ಕ್ರಮವಾಗಿ ತಿನ್ನಲು ಬಿಸ್ಕತ್ತು, ಬ್ರೆಡ್ಡು, ಮ್ಯಾಗಿ ಇತ್ಯಾದಿಗಳನ್ನು ಕೋಣೆಯಲ್ಲಿ ಇರಿಸಿದ.  ಇದನ್ನು ಕಂಡ ವೆಂಕಟೇಶ ನಕ್ಕಿದ್ದ.  ಇದೆಲ್ಲ ಮಾಮೂಲು.  ಬಂದ್-ಗಿಂದ್ ಏನಿದ್ರೂ ನಗರದೊಳಗೆ.  ನಾವು ಇರುವುದು ಹೈಟೆಕ್ ಸಿಟಿ ಹತ್ತಿರ, ಇಲ್ಲಿ ಯಾವ ಬಂದೂ ಇರೋದಿಲ್ಲ.  ಇದ್ದರೂ ಅಂಗಡಿ ಬಂದಾಗೋದು ಕಡಿಮೆ ಎಂದು ಕಿಟ್ಟಿಗೆ ತಿಳಿಹೇಳಿದ.  ತಿಂಗಳಾನು ಗಟ್ಟಲೆ ಬಂದ್ ನಡೆದಿದ್ದರಿಂದ ಬಂದ್‌ಗಳು ಸಾಮಾನ್ಯವಾಗಿ ದಿನನಿತ್ಯದ ಒಂದು ಅಂಗವಾಗಿ ಹೋಗಿಬಿಟ್ಟಿತ್ತು.  ಚಳಿಗಾಲ ಅದಾಗಲೆ ಪ್ರರಂಭವಾಗಿ ವಿಪರೀತ ಚಳಿ ಉಂಟಾಗುತ್ತಿತ್ತು.  ಗುಂಟೂರಿನಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಕಿಟ್ಟಿ ಇಷ್ಟು ದಿನ ಹೇಗೋ ತಣ್ಣೀರು ಸ್ನಾನ ಮಾಡುತ್ತಿದ್ದ.  ಆದರೆ ವಿಪರೀತ ಚಳಿಗೆ ಮೈ ತಣ್ಣೀರನ್ನು ಒಪ್ಪಲಿಲ್ಲ.  ಅದಕ್ಕಾಗಿ ಅವನು ಒಂದು ಹೀಟರ್‍ ಕಾಯ್ಲ್‌ ಅನ್ನು ಕೊಂಡುಕೊಳ್ಳಬೇಕೆಂದು ನಗರದ "ಕೋಠಿ" ಎಂಬ ಪ್ರದೇಶದಲ್ಲಿ ಕಡಿಮೆ ದರದಲ್ಲಿ ಲಭ್ಯವೆಂದು ಸಹೋದ್ಯೋಗಿಗಳಿಂದ ತಿಳಿದ.

ಅಂದು ಶನಿವಾರ ಹೀಟರ್‍ ಕಾಯ್ಲ್ ಮತ್ತು ಇತರೆ ಸಾಮಾನು ತರಲು ಕೋಠಿಯ ಬಸ್ಸು ಹತ್ತಿದ.  ಕೋಠಿಯಲ್ಲಿ ಜನ ಜಂಗುಳಿ.  ಹೊಸ ಸ್ಥಳವಾದ್ದರಿಂದ ಅಡ್ಡಾಡತೊಡಗಿದ.  ಎಲ್ಲೆಡೆ "ಜೈ ತೆಲಂಗಾಣ" ಭಿತ್ತಿ ಪತ್ರಗಳು, ಅಲ್ಲಲ್ಲೇ ಕೆಲವು ರಾಜಕೀಯ ಪುಢಾರಿಗಳು ಕಾಣಿಸುತ್ತಿದ್ದರು.  ಬಂದ್ ಪ್ರಯುಕ್ತ ವಿಪರೀತ ಪೋಲೀಸ್ ಬಂದೋಬಸ್ತ್ ಇತ್ತು.  ಅಲ್ಲಿನ ವೃತ್ತದಲ್ಲಿ ರಸ್ತೆ ದಾಟಲು ಮುಂದಾಗಲು ಒಂದು ದೊಡ್ಡ ಕಾರು ಬಂದು ನಿಂತಿತು.  ಇದ್ದಕ್ಕಿದ್ದಂತೆ ಅಲ್ಲಿದ್ದ ಜನರೆಲ್ಲ "ಜೈ ತೆಂಗಾಣ, ಜೈ ಜೈ ತೆಲಂಗಾಣ.  .... ಅಣ್ಣನಿಗೆ ಜೈ" ಎಂದು ಜೈಕಾರ ಹಾಕಿದರು.  ಕಾರಿನೊಳಗಿಂದ ರಾಜಕೀಯ ವ್ಯಕ್ತಿಯೊಬ್ಬರು ಹೊರಬಂದರು.  ಸುತ್ತ ಮುತ್ತಲಿದ್ದ ಪೋಲೀಸರೆಲ್ಲ ಸುತ್ತುವರಿದರು.  ಇವರ ಮಧ್ಯ ಕಿಟ್ಟಿ ಸಿಲುಕಿಕೊಂಡ.  ಇಂತಹ ಸಂದರ್ಭವನ್ನು ಎಂದು ಎದುರಿಸದ ಕಿಟ್ಟಿಗೆ ಏನೂ ತೋಚದಂತಾಗಿ ನಡುಕಹತ್ತಿತು.  ಕಿಟ್ಟಿ ಗುಂಪಿನಲ್ಲಿ ಲೀನನಾದ.  ಈ ಗಾಬರಿಯಲ್ಲಿ ಇರಬೇಕಾದರೆ ಅದರೊಳಗೆ ಒಂದು ಪರಿಚಿತವಾದ ಮುಖ ಕಂಡಿತು.  ಅವನನ್ನು ಎರಡು ದಿನಗಳ ಹಿಂದೆ ತನ್ನ ಕೆಲಸದಲ್ಲಿ ಕಂಡ ಹಾಗೆ ನೆನಪು ಮೂಡಿತು.  ಅವನನ್ನು ನೋಡಿ ಕಿಟ್ಟಿ ನಗೆ ಬೀರಿದ.  ಪಕ್ಕಕ್ಕೆ ಕರೆದು ತನ್ನ ಪರಿಚಯ ಮಾಡಿಕೊಂಡು ಎರಡು ದಿನದ ಹಿಂದೆ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಸಂದರ್ಶನಕ್ಕೆ ಬಂದಿದ್ದಾಗ ನೋಡಿದುದಾಗಿ ತಿಳಿಸಿದ.  ಅದಕ್ಕೆ ಆ ವ್ಯಕ್ತಿ ಹೌದು, ಸಂದರ್ಶನ ಸಫಲವಾಗಲಿಲ್ಲ, ಆದ್ದರಿಂದ ತಾತ್ಕಾಲಿಕವಾಗಿ "ಜೈ ತೆಲಂಗಾಣ" ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೇನೆ.  ದಿನಕ್ಕೆ ಇನ್ನೂರು ರೂಪಾಯಿ ಕೊಡುತ್ತಾರೆ, ಊಟ ತಿಂಡಿ ಬಿಟ್ಟು ಎಂದ.  ಅಲ್ಲಿಗೆ ಅವನಿಗೆ ವಿದಾಯ ಹೇಳಿ ಕಿಟ್ಟಿ ಹೀಟರ್‍ ಕಾಯ್ಲ್ ಕೊಂಡು ಕೋಣೆಗೆ ನಡೆದ.

ಅಮೆರಿಕೆಯಿಂದ ಸ್ಟೀವನ್ ಹೈದಾಬಾದಿಗೆ ಬರುವ ದಿನ ನಿಗಧಿಯಾಗುತ್ತಿದ್ದಂತೆ, ಸಂಸ್ಥೆಯಲ್ಲಿ ಕಟ್ಟು ನಿಟ್ಟಿನ ನಿಯಮಾವಳಿಗಳು, ರೀತಿ ನೀತಿಗಳು ರೂಪುಗೊಂಡವು.  ಸ್ಟೀವನ್‌ನೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಉತ್ತರಿಸಬೇಕು, ಎಂಬಿತ್ಯಾದಿ ತರಬೇತಿಯನ್ನು ತಂಡ ನಾಯಕರು ಕೊಡಲಾರಂಭಿಸಿದರು.  ಸ್ಟೀವನ್ ಹೈದರಾಬಾದಿನಲ್ಲಿ ಇರುವವರೆಗೆ ಯಾರಿಗೂ ರಜೆ ಇಲ್ಲ ಎಂದು ಘೋಶಿಸಿದ್ದರು.  ಸ್ಟೀವನ್ ಹೈದರಾಬಾದಿಗೆ ಬಂದಾಗ ಸಂಸ್ಥೆಯ ವತಿಯಿಂದ ಒಳ್ಳೆಯ ಆತಿಥ್ಯ ನೀಡಲಾಯಿತು.  ಅದಾಗಲೇ "ಜೈ ತೆಲಂಗಾಣ" ಹೋರಾಟವನ್ನು ಚುರುಕುಗೊಳಿಸಲು ಸರ್ಕಾರ ಸ್ವಾಮ್ಯದ ವಿವಿಧ ಸಂಸ್ಥೆಗಳ ನೌಕರರು ಸರದಿಯ ಪ್ರಕಾರ ಬಂದ್ ಆಚರಿಸತೊಡಗಿದರು.  ಸ್ಟೀವನ್ ಕಛೇರಿಗೆ ಬಂದ ದಿನ ಸರ್ಕಾರಿ ಸ್ವಾಮ್ಯದ ವಿದ್ಯುತ್ ನೌಕರರು ಬಂದ್ ಆಚರಿಸಿದುದರಿಂದ ವಿದ್ಯುತ್ ಬಂದಾಯಿತು.  ಜನರೇಟರ್‍ ಇದ್ದುದರಿಂದ ವ್ಯವಸ್ಥಾಪಕರು ಇಡೀ ದಿನ ಜನರೇಟರ್‌ ಓಡಲು ಆಜ್ಞಾಪಿಸಿದರು.  ಮುನಿಸಿಪಲ್ ನೌಕರರು ತಮ್ಮ ಬಂದ್ ಸರದಿಯನ್ನು ಆಚರಿಸಿದರು.  ಎಲ್ಲಿ ನೋಡಿದರು ಗಲೀಜು, ಗಬ್ಬು ವಾಸನೆ.  ಸಾರಿಗೆ ಸಂಸ್ಥೆಯ ನೌಕರರು ಬಂದ್ ಆಚರಿಸಿದರು.  ಕಛೇರಿಗೆ ಬರುವ ಹೆಚ್ಚಿನ ನೌಕರರು ಬಸ್ಸನ್ನು ಅವಲಂಭಿಸಿದುದರಿಂದ ಹಾಜರಾತಿ ಕಡಿಮೆಯಿತ್ತು.  ಹದಿನೈದು ದಿನಗಳಿಂದ ಬಂದ್ ಶಬ್ದ ಕೇಳಿ, ಪತ್ರಿಕೆಗಳಲ್ಲಿ ಓದಿ ತಿಳಿದಿದ್ದ ಸ್ಟೀವನ್‌ಗೆ ಯಾಕೋ ಹೈದರಾಬಾದಿನ ಮೇಲೆ ಸಿಟ್ಟು ಬರಲಾರಂಭಿಸಿತು.  ನೌಕರರ ಹಾಜರಾತಿ ಕಡಿಮೆಯಾದ ದಿನ ಕೆಲಸ ಕಾರ್ಯಗಳು ಕಡಿಮೆಯಾದ್ದರಿಂದ, ಒಂದು ರೀತಿಯ ಅಸಹನೆ ಉಂಟಾಯಿತು.  ತನ್ನ ಪ್ರಾಜೆಕ್ಟ್‌ಗೆ ಎಲ್ಲಿ ತೊಡಕಾಗುವುದೆಂಬ ಚಿಂತೆ ಕಾಡಲಾರಂಭಿಸಿತು.  ತನ್ನ ಅನಿಸಿಕೆಗಳನ್ನು ಅಮೇರಿಕೆಯಲ್ಲಿಯ ಮೇಲಧಿಕಾರಿಗಳಿಗೆ ತಿಳಿಸಿದ.  ಅವನಿಗೆ ಪ್ರಾಜೆಕ್ಟನ್ನು "ಬ್ಯಾಂಗಲೋರ್‍ಡ್" ಮಾಡಲು ಆದೇಶ ಬಂತು.  ಈ ವಿಷಯವನ್ನು ಸ್ಥಳೀಯ ವ್ಯವಸ್ಥಾಪಕರಿಗೆ ತಿಳಿಸಿ, ತಾನು ಬೆಂಗಳೂರಿಗೆ ಹೊರಡಲು ಸಿದ್ಧನಾದ.

ಬಹಳ ಕಷ್ಟಪಟ್ಟು ಹಿಡಿದಿದ್ದ ಪ್ರಾಜೆಕ್ಟ್‌ ಕೈ ಬಿಟ್ಟು ಹೋದುದರ ಬಗ್ಗೆ ವ್ಯವಸ್ಥಾಪಕರಿಗೆ ಅತೀವ ದುಃಖ ಉಂಟಾಯಿತು.  ಈ ಪ್ರಾಜೆಕ್ಟ್‌ಗಾಗಿ ನಿಯಮಿಸಿದ ನೌಕರರನ್ನು ಏನು ಮಾಡುವುದೆಂಬ ಚಿಂತೆ ಗಾಢವಾಗಿ ಕಾಡಲಾರಂಭಿಸಿ ಕೊನೆಯದಾಗಿ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಬೇಕೆಂದು ನಿರ್ಧರಿಸಿದರು.  ಒಂದು ದಿನ ನೌಕರರು ಬೆಳಿಗ್ಗೆ ಬಂದೊಡನೆ, ಈ ಪ್ರಾಜೆಕ್ಟಿನ ಹುಡುಗರನ್ನು ಒಬ್ಬೊಬ್ಬರನ್ನಾಗಿ ಕರೆದು ತಾವು ಕೆಲಸ ಕಳೆದುಕೊಂಡ ವಿಷಯ ಹಾಗು ಕಾರಣ ತಿಳಿಸಿ ಮನೆಗೆ ಕಳುಹಿಸಿದರು.  ಕಿಟ್ಟಿಯೂ ಕೆಲಸ ಕಳೆದುಕೊಳ್ಳಬೇಕಾಯಿತು.  ಈ ಸುದ್ದಿ ಕೇಳುತ್ತಲೇ ಕಿಟ್ಟಿಯೂ ಚಿಂಕ್ರೋಭೆಗೆ (ಚಿಂತೆ, ಆಕ್ರೋಶ, ಭಯ) ಒಳಗಾದ.  ಹೆಚ್ಚಿನ ಸಂಪಾದನೆಯ ದಾರಿ ಹಿಡಿಯಲು ಹೋಗಿ ಶೂನ್ಯ ಸಂಪಾದನೆಯತ್ತ ಕೊಂಡೊಯ್ದ ವಿಧಿಯಾಟಕ್ಕೆ ಮರುಗಿದ.  ದಿಕ್ಕು ಕಾಣದೆ ರೂಮಿನತ್ತ ಹೆಜ್ಜೆ ಹಾಕತೊಡಗಿದ.  ದಾರಿಯಲ್ಲಿ "ಜೈ ತೆಲಂಗಾಣ, ಜೈ ಜೈ ತೆಲಂಗಾಣ" ಘೋಷಣೆಯೊಂದಿಗೆ ಸಾಗುತ್ತಿದ್ದ ಗುಂಪಿನಲ್ಲಿ ಲೀನನಾದ.  ಆರ್ಚೀಸ್ ಗ್ಯಾಲರಿಯ ಷೋಕೇಸ್ನಲ್ಲಿ "ಬಾರ್ಬಿ" ಗೊಂಬೆ ಎಂದಿನಂತೆ ಮುಗುಳ್ನಗೆ ಬೀರುತ್ತಲಿತ್ತು.
     *****
Read more...