Sunday, July 28, 2013

Posted by ಬಡಗಿ | 0 comments

ಬೆಂಗಳೂರು ಬೆಂದಕಾಳೂರೇ?

ಹೈದರಾಬಾದಿನ "ಸಿದ್ಧರಗುಟ್ಟೆ" / ಸಿದ್ಧುಲಗುಟ್ಟೆ ಯಲ್ಲಿ ಒಂದು ಗುಡಿಯಿದೆಯೆಂದು ಸಮಯವಿದ್ದಾಗ ಸಂದರ್ಶಿಸಬೇಕೆಂದು ಸಹೋದ್ಯೋಗಿ ಹೇಳಿದಾಗ, ಹೋಗುವ ಮಾರ್ಗದ ಹುಡುಕಾಟ ಗೂಗಲ್ ನಕ್ಷೆಯಲ್ಲಿ ಪ್ರಾರಂಭಿಸಿದೆ.  ಬೆಂಗಳೂರಿನ ಬಳಿ ಇರುವ "ಸಿದ್ಧರಬೆಟ್ಟ" ಬಲ್ಲವನಾಗಿದ್ದ ನನಗೆ, ಹೈದರಾಬಾದಿನ ಸಿದ್ಧುಲಗುಟ್ಟೆಯನ್ನೂ ನೋಡುವ ಹಂಬಲವಾಯಿತು.

ಹೀಗೇ ದಾರಿಗಾಗಿ ತಡಕಾಟ ಮಾಡಿದಾಗ ಆಶ್ಚರ್ಯ ಕಾದಿತ್ತು.  ಹೈದರಾಬಾದಿನ ಹೊರ ವರ್ತುಲ ರಸ್ತೆಯಲ್ಲಿ "ಬೊಂಗಳೂರು"! ಕಾಣಿಸಿತು.  ನನಗೆ ಕೂತೂಹಲ ತಾಳಲಾಗಲಿಲ್ಲ.  ಈಗಾಗಲೇ "ಬಗಲಗುಂಟೆ" ಯನ್ನು ಹೈದರಾಬಾದಿನಲ್ಲೂ ಕಂಡ ನನಗೆ ಕೆಂಪೇಗೌಡರ "ಬೆಂಗಳೂರು" ಪದ  "ಬೆಂದಕಾಳೂರು"ನಿಂದ ಬಂದದ್ದೇ? ಎಂಬ ಪ್ರಶ್ನೆ ಕಾಡಲಾರಂಭಿಸಿತು.

ಇದೇ ಸಮಯಕ್ಕೆ ಹೈದರಾಬಾದಿನ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಶಂ ಬಾ ಜೋಶಿಯವರ "ಎಡೆಗಳು ಹೇಳುವ ಕಂನಾಡ ಕಥೆ" ಪುಸ್ತಕ ಧೂಳಿನ ರಾಶಿಯಿಂದ ಕಣ್ಣಿಗೆ ಹೇಗೋ ಬಿದ್ದಿತ್ತು.  ಈ ಪುಸ್ತಕದಲ್ಲಿ "ಕೋಲಾರ" ಊರಿನ ಒಂದು ಉದಾಹರಣೆ ಪುಟ ೧೧ ರಲ್ಲಿ ಕೆಳಕಂಡಂತೆ ಲಭ್ಯವಿದೆ.

"ಕೋಲಾರವೆಂಬುದು ಮೈಸೂರ ಸಂಸ್ಥಾನದಲ್ಲಿ ಒಂದೇ ಇಲ್ಲ.  ಈ ಹೆಸರಿಗೆ ಸ್ವಲ್ಪ ಹೆಚ್ಚು ಕಡಿಮೆ ಹೋಲಿಕೆಯಿರುವ ಇನ್ನೂ ಕೆಲವು ಊರುಗಳು ಕಂನಾಡ ಎಲ್ಲ ಭಾಗಗಳಲ್ಲಿಯೂ ಇವೆ.  ವಿಜಯಾಪುರ ಜಿಲ್ಹೆಯಲ್ಲಿ ಒಂದು ಕೊಲ್ಹಾರವೆಂಬ ಊರು ಇದೆ.  ಸಂಸ್ಥಾನ ಕೊಲ್ಲಾಪುರ ಅಥವಾ ಕೋಲ್ಹಾಪುರವೆಂಬುದಂತು ಸುಪ್ರಸಿದ್ಧ.  ದಕ್ಷಿಣ ಕಂನಡ ಜಿಲ್ಹೆಯಲ್ಲಿ ಒಂದು ಕೊಲ್ಲೂರು ಗ್ರಾಮವಿದೆ.  ನಿಜಾಂ ಇಲಾಖೆಯ ಬೀದರ ಜಿಲ್ಹೆಯಲ್ಲೂ ಒಂದು ಕೊಲ್ಲೂರುಂಟು.  ಅಲ್ಲದೆ ಇನ್ನೂ ಎಷ್ಟೊ ಇವೆ."

ಕೋಲಾರವೇ ಇಷ್ಟೊಂದು ಊರುಗಳು ಇರುವಾಗ ಇನ್ನು ಬೆಂಗಳೂರು?  ಇದಕ್ಕೆ ಪುಷ್ಠಿಕೊಡುವಂತೆ ನನಗೆ ಕಂಡಿದ್ದು ಹೈದರಾಬಾದಿನ "ಬೊಂಗಳೂರು" ಸುತ್ತಮುತ್ತ ಕಾಣುವ ಬೇರೆ ಊರುಗಳು - ಬೊಗುಲ್‌ಗುಂಟ, ದಿಂಡಿಗಲ್, ಧರ್ಮಪುರಿ, ಧರ್ಮಾವರ, ಜಾಲಪಲ್ಲಿ, ಜಾಲ, ಯಶವಂತಪುರ, ಗೌಡವಳ್ಳಿ, ಗೊಲ್ಲಪಲ್ಲಿ, ಉತ್ತರಪಲ್ಲಿ, ಉಪ್ಪಾರಪಲ್ಲಿ ಇನ್ನೂ ಅನೇಕ.

ಇವೆಲ್ಲ ಕಂಡಮೇಲೆ ನಮ್ಮ ಬೆಂಗಳೂರು ಹೆಸರು ಬೆಂದಕಾಳೂರಿನಿಂದಲೇ ಬಂದದ್ದೇ ಎಂಬ ಸಂಶಯಮೂಡಿದೆ.  ಬೆಂದಕಾಳೂರಿನ ಕಥೆ ಜಾಲತಾಣ  http://controversialhistory.blogspot.in ತಲೆಬರಹ "Lie wellstruct is as Good as Truth" ದಂತಿರಬಹುದೇ.

ಬಲ್ಲವರು ತಿಳಿಸಿ!

ಸಂಬಂಧಿಸಿದ ಓದು: http://kannudi.blogspot.in/2013/01/blog-post_7771.html

0 comments: