Tuesday, November 25, 2014

Posted by ಬಡಗಿ | 0 comments

ಐದು ಕಿಲೋ ಚಾಕಲೇಟು

ಜವನಕ್ಕನ ಕೆರೆಯ ದಡದಲ್ಲಿ ಸಣ್ಣ ಚಾಕಲೇಟ್ ಖಾರ್ಕಾನೆಯೊಂದು ಇತ್ತು.  ಖಾರ್ಕಾನೆ ಸಣ್ಣದಾದರೂ ಅದರ ತಯಾರಿಕೆಯ ಚಾಕಲೇಟುಗಳು ಬಹಳ ಶುಚಿ ರುಚಿಯಾಗಿದ್ದವು.  ಅದರ ಒಡೆಯರಾದ ನಿತೇಶ ಶೆಟ್ಟಿಯವರು ಬಹಳ ಶಿಸ್ತಿನ ಮನುಷ್ಯ.  ಎಲ್ಲದರಲ್ಲೂ ಅಚ್ಚುಕಟ್ಟು, ಕಟ್ಟುನಿಟ್ಟು.  ಖಾರ್ಕಾನೆಯನ್ನು ಸ್ವಚ್ಫವಾಗಿ, ಇಲಿ ಜಿರಲೆಗಳಿಂದ ಮುಕ್ತವಾಗಿ ಇಟ್ಟಿದ್ದರು.

ಹೊಸದರಲ್ಲಿ ಅವರ ಚಾಕಲೇಟನ್ನು ಮಾರಲು ಬಹಳ ಕಷ್ಟಪಡಬೇಕಾಗುತ್ತಿತ್ತು.  ಕಾರ್ಮಿಕರಿಗೆ ತಿಂಗಳ ಸಂಬಳ ಸರಿಯಾಗಿ ಕೊಡುವುದೇ ಒಂದು ಸಾಹಸವಾಗಿದ್ದಿತು.  ದಿನ ಕಳೆದಂತೆ, ಇವರ ಚಾಕಲೇಟುಗಳಿಗೆ ಬೇಡಿಕೆ ಹೆಚ್ಚಾಗಿ, ವಿಸ್ತರಿಸಬೇಕಾಯಿತು.

ಕಾರ್ಖಾನೆ ಬೆಳೆದಂತೆಲ್ಲ ತೊಂದರೆಗಳು ಬೆಳೆಯತೊಡಗಿದವು.  ಸರ್ಕಾರಿ ವಿದ್ಯುತ್ ಸಂಸ್ಥೆಯವರು ಬೇಕೆಂತಲೆ ಇವರಿಗೆ ಹರಿಯುವ ವಿದ್ಯುತ್ ಕತ್ತಿರಿಸುವುದು, ವಿವಿಧ ಸಬೂಬು ನೀಡಿ ತಂತಿ ಮುರಿದಿದೆ ಎಂದೂ, ಸರಿಪಡಿಸಲು ಸಿಬ್ಬಂದಿ ಕೊರತೆಯೆಂದು, ವಿದ್ಯುತ್ ಅಭಾವವೆಂದು, ಕೊನೆಯಿಲ್ಲದ ಕಾರಣಗಳನ್ನು ನೀಡುತ್ತಿದ್ದರು.  ಇದೇ ರೀತಿ ನೀರಿನವರೂ, ನಗರ ಸಭೆಯವರೂ ಕೂಡ.  ಅನತಿ ದೂರದಲ್ಲಿದ್ದ ಇತರೆ ಕಾರ್ಖಾನೆಗಳಿಗೆ ಹರಿಯುವ ವಿದ್ಯುತ್, ನೀರು, ಇತರೆ ಮೂಲ ಸೌಕರ್ಯಗಳು ಇವರಿಗೆ ಮಾತ್ರ ಪದೇ ಪದೇ ತಡೆಯಾಗುತ್ತಿದ್ದವು.  ಪಕ್ಕದ ಕಾರ್ಖಾನೆಗಳ ಮಾಲೀಕರೊಂದಿಗಿನ ಮಾತಿನಲ್ಲಿ ಅವರಿಗೆ ತಿಳಿದ್ದಿದ್ದೇನೆಂದರೆ ವಿದ್ಯುತ್ತಿನವರಿಗೆ, ನೀರಿನವರಿಗೆ, ನಗರಸಭೆಯವರಿಗೆ ತಾವು ಪಾವತಿಸುವ ಬಿಲ್ಲು, ತೆರಿಯೊಂದಿಗೆ ಅಲ್ಲಿನ ಜನರಿಗೆ ಹೆಚ್ಚುವರಿಯಾಗಿ ಭಕ್ಷೀಸನ್ನು ನೀಡದಿರುವುದೇ ಮೂಲ ಕಾರಣವೆಂದು ತಿಳಿಯಿತು.

ವಿದ್ಯುತ್ತಿನವರಿಗೆ, ನೀರಿನವರಿಗೆ, ನಗರಸಭೆಯವರಿಗೆ ಭಕ್ಷೀಸನ್ನು ನೀಡಲು ಶುರುವಿಟ್ಟುಕೊಂಡರು.  ಆದರೆ ಸರ್ಕಾರಿ ನೌಕರರ, ರಾಜಕೀಯದವರನ್ನು ತೃಪ್ತಿಪಡಿಸಲಾದೀತೆ?  ಎಷ್ಟು ಕೊಟ್ಟರು ಸಾಲದೆಂಬಂತೆ ಹಪಹಪಿಸುವ ಜನರ ಕಂಡು ನಿತೇಶ ಶೆಟ್ಟಿಯವರಿಗೆ ರೋಸಿ ಹೋಗಿತ್ತು.

ಈ ನಡುವೆ ಅವರ ಕಾರ್ಖಾನೆಗೆ ಸರ್ಕಾರಿ ಇಲಾಖೆಯಿಂದ ತಿನಿಸು ತಪಾಸಣೆಗೆಂದು ಸಣ್ಣೇಗೌಡನೆಂಬ ಅಧಿಕಾರಿ ಬಂದರು.  ಸರ್ಕಾರಿ ನಿಯಮದಂತೆ ಎಲ್ಲವೂ ಸ್ವಚ್ಫವಾಗಿ ಶುಚಿಯಾಗಿದದ್ದು ಅವರ ಗಮನಕ್ಕೆ ಬಂತು.  ಭಕ್ಷೀಸಿಲ್ಲದೆ ಬರಿಗೈಯಲ್ಲಿ ಹಿಂದಿರುಗಬೇಕೆಂದು ಮನವರಿಕೆಯಾದಾಗ, ಯಾವುದೋ ಒಂದು ಸಣ್ಣ ತಪ್ಪು ಕಂಡು ಹಿಡಿದು ಅದನ್ನು ದೊಡ್ಡದಾಗಿ ಮಾಡಿ, ಕಾರ್ಖಾನೆಯ ಲೈಸನ್ಸ್‌ ಅನ್ನು ರದ್ದು ಪಡಿಸುವುದಾಗಿ ಹೆದರಿಸಿದರು.  ಆ ಕಾರಣವನ್ನು ಅಧಿಕಾರಿ ಬೇಕೆಂತಲೇ ನೀಡುತ್ತಿರುವುದು ಒಡೆಯರಿಗೂ ತಿಳಿದ್ದಿದ್ದರಿಂದ, ಅವರಿಗೆ ಅದರ ಒಳಗುಟ್ಟು ಅರ್ಥವಾಯಿತು.  ಅವರು ಮ್ಯಾನೇಜರ್‌ರನ್ನು ಕರೆದು ಒಂದಷ್ಟು ಭಕ್ಷೀಸು ನೀಡಿ ಅವರನ್ನು ಕಳುಹಿಸಬೇಕೆಂದು ತಿಳಿಸಿದರು.

ಭಕ್ಷೀಸನ್ನು ಪಡೆದ ಸಣ್ಣೇಗೌಡ, ಒಂದೈದು ಕೆ.ಜಿ ಚಾಕಲೇಟು ನೀಡಬೇಕೆಂದು ಆಗ್ರಹಿಸಿದರು.  ಚಾಕಲೇಟ್ ಕಾರ್ಖಾನೆಯಾದ್ದರಿಂದ ಅಲ್ಲಿ ಬರುವ ವಿದ್ಯುತ್ತಿನವರು, ನೀರಿನವರು, ನಗರಸಭೆಯವರ ಚಾಕಲೇಟಿನ ಕೋರಿಕೆ ಸಾಮಾನ್ಯವಾದದ್ದೇ.  ಇದನ್ನೆಲ್ಲ ನೋಡಿ ರೋಸಿ ಹೋಗಿದ್ದ ಒಡೆಯರು, ಮ್ಯಾನೇಜರರನ್ನು ಕರೆದು ಇದಕ್ಕೆ ಏನಾದರು ಉಪಾಯ ಹುಡುಕಬೇಕೆಂದು ಹೇಳಿದ್ದರು.
     *   *   *

ಮ್ಯಾನೇಜರ್‍ ಮಾಯಾಚಾರಿ ಹಲವು ತಿಂಡಿಗಳ ಕಾರ್ಖಾನೆಗಳಲ್ಲಿ ಪಳಗಿದ್ದ ವ್ಯಕ್ತಿ.  ಕಾರ್ಖಾನೆ ವಿಸ್ತಾರಗೊಂಡಾಗ ಸೇರಿಕೊಂಡಿದ್ದ ಈತ, ಬಹಳ ನಿಯತ್ತಾಗಿ ಕಾರ್ಮಿಕರಿಗೂ, ಒಡೆಯರಿಗೂ ಹತ್ತಿರವಾಗಿದ್ದ.

ಚಾಕಲೇಟ್ ಕಾರ್ಖಾನೆಯಲ್ಲಿ ಮುರಿದ ಚಾಕಲೇಟುಗಳು, ಕಸದಲ್ಲಿ ಬಿದ್ದ ಚೂರುಗಳನ್ನು, ಪಾಕ ಕೆಟ್ಟಿದ ಸಿಹಿಯನ್ನು ಮತ್ತು ತಿನ್ನಲು ಯೋಗ್ಯವಲ್ಲದ ಪದಾರ್ಥಗಳನ್ನು ಬಿಸಾಡದೇ ಅವನ್ನು ಹೊಸ ಮಾದರಿಯ ಚಾಕಲೇಟು ತಯಾರಿಸಲು ಮತ್ತು ಪ್ರಯೋಗ ಮಾಡಲು ಉಪಯೋಗಿಸಿ ಕೊಳ್ಳುತ್ತಿದ್ದರು.  ಈ ರೀತಿ ಉಪಯೋಗಿಸಿದ ಪದಾರ್ಥಗಳನ್ನು ಬಹಳ ಭದ್ರತೆಯಿಂದ ಪ್ರಾಣಿಗಳು ಸಹ ತಿನ್ನದಂತೆ ಎಚ್ಚರ ವಹಿಸುತ್ತಿದ್ದರು.  ಬಾಯ್ಲರಿನಲ್ಲಿ ಹೆಚ್ಚು ಉಷ್ಣದಿಂದ ಇವು ತಯಾರಾಗುತ್ತಿದ್ದು ಪ್ರಾಣಕ್ಕೇನು ತಕ್ಷಣ ತೊಂದರೆಯಾಗದಿದ್ದರು, ಬಹಳ ದಿನಗಳವರೆಗೆ ಹೆಚ್ಚು ಸೇವಿಸಿದಲ್ಲಿ ಮೂತ್ರ ಕೋಶ ತೊಂದರೆ, ಕರುಳು ಬೇನೆ ಕಟ್ಟಿಟ್ಟ ಬುತ್ತಿ.  ಆದರಿಂದಲೇ ಒಡೆಯರು ಅದನ್ನು ಕಸಕ್ಕೆ ಬಿಸಾಡಲು ಹಿಂಜರಿಯುತ್ತಿದ್ದರು.  ಕಸದಲ್ಲಿ ಹಸು, ನಾಯಿ, ಇತರೆ ಪ್ರಾಣಿಗಳು, ಪಕ್ಷಿಗಳು ಮತ್ತು ಕಸ ಆಯುವವರು ತಿಂದು ನೋಯಬಾರದೆಂಬುದು ಅವರ ಕಾಳಜಿ. ಒಂದೊಮ್ಮೆ ಚಾಕಲೇಟಿನಲ್ಲಿ ಬಳಸುವ ಗ್ಲೂಕೋಸಿನ ಡ್ರಮ್ಮಿನಲ್ಲಿ ಕಪ್ಪೆ ಸತ್ತಿದ್ದು, ಅದರಿಂದ ತಯಾರಿತ ಗೊಂಡ ಅಷ್ಟೂ ಚಾಕಲೇಟನ್ನು ಈ ಪ್ರಯೋಗಕ್ಕೆ ಉಪಯೋಗಿಸಿಕೊಂಡಿದ್ದರು. ಹೊಸ ಹೊಸ ಬಗೆಯ ಅಚ್ಚುಗಳು ಮತ್ತು ಆಕರ್ಷಕ ಪೊಟ್ಟಣಗಳು ಪ್ರತಿವರ್ಷ ಬಿಡುಗಡೆಗೊಳಿಸುತ್ತಿದ್ದರು. 
     *   *   *

ಮಾಯಾಚಾರಿ ಉಚಿತವಾಗಿ ಚಾಕಲೇಟು ಬೇಡುವ ಸರ್ಕಾರಿ ಜನಕ್ಕೆ ಇವನ್ನು ಹಂಚಿದರೆ ಸಂಭವಿಸುವ ನಷ್ಟದಲ್ಲಿ ಸ್ವಲ್ಪವಾದರೂ ನಿಲ್ಲುತ್ತದೆಂದು ಒಡೆಯರಿಗೆ ಸಲಹೆ ಇತ್ತ.  ಒಡೆಯರಿಗೂ ಇದು ಸರಿಯೆನಿಸಿತ್ತು.  ನಿಯತ್ತಿನ ಅಧಿಕಾರಿಗಳನ್ನು ಕಂಡರೆ ಅವರೇ ಸ್ವತಃ ಒಳ್ಳೆಯ ಚಾಕಲೇಟುಗಳನ್ನು, ಕಾಡುವ ವಿದ್ಯುತ್ತಿನ, ನೀರಿನ, ನಗರಸಭೆಯ ಅಧಿಕಾರಿಗಳಿಗೆ ಈ ಪ್ರಾಯೋಗಿಕ ಚಾಕಲೇಟುಗಳನ್ನು ನೀಡುವುದು ರೂಢಿಯಾಗಿತ್ತು.  ಅದಕ್ಕೆಂದೇ ವಿಶೇಷವಾದ ರಂಗು ರಂಗಿನ ಪೊಟ್ಟಣಗಳನ್ನು ಇಟ್ಟಿದ್ದರು.  ಪೊಟ್ಟಣ ಬಹಳ ಆಕರ್ಷಕವಾಗಿದ್ದು ಮನಸೂರೆಗೊಳ್ಳುವಂತಿತ್ತು.

ಈ ರೀತಿಯ ಚಾಕಲೇಟು ಒಬ್ಬರಿಗೆ ಒಂದು ಕೆ.ಜಿ. ಗಿಂತ ಹೆಚ್ಚು ನೀಡುತ್ತಿರಲಿಲ್ಲ.  ಸಣ್ಣೇಗೌಡರಿಗೂ ಒಂದು ಕೆ.ಜಿ. ಚಾಕಲೇಟ್ ನೀಡಿದರು.  ಸಣ್ಣೇಗೌಡರು ತೃಪ್ತಿಗೊಳ್ಳದೆ ಇನ್ನು ನಾಲ್ಕು ಕೆ.ಜಿ. ಉಚಿತವಾಗಿ ನೀಡಲೇಬೇಕೆಂದು ತಾಕೀತು ಮಾಡಿದರು.  ಒಡೆಯರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದ ಚಾಕಲೇಟು ನೀಡಬೇಕೆಂದು ಮಾಯಾಚಾರಿಗೆ ಹೇಳಿದರು.  ಮಾರುಕಟ್ಟೆಗೆ ಬಿಡುಗಡೆಮಾಡುತ್ತಿದ್ದ ಚಾಕಲೇಟಿನ ಪೊಟ್ಟಣಗಳು ಸಾಮಾನ್ಯವಾಗಿ ಕಂಡು, ಸಣ್ಣೇಗೌಡ ಮೊದಲು ನೀಡಿದ ಆಕರ್ಷಕ ಪೊಟ್ಟಣದ ಚಾಕಲೇಟುಗಳನ್ನೇ ನೀಡಬೇಕೆಂದು ಹಠ ಹಿಡಿದರು.  ಬೇರೆ ದಾರಿ ಕಾಣದೇ ಒಡೆಯರು ಐದು ಕೆ.ಜಿ. ಪ್ರಯೋಗದ ಚಾಕಲೇಟನ್ನು ಆಕರ್ಷಕ ಪೊಟ್ಟಣಗಳಲ್ಲಿ ಸಣ್ಣೇಗೌಡರಿಗೆ ನೀಡಿದರು.

ಸಂತುಷ್ಟರಾದ ಸಣ್ಣೇಗೌಡರು ಇವರಿಗೆ "ಎಲ್ಲ ಸರಿಯಾಗಿದೆ" ಎಂದು ಪತ್ರನೀಡಿ ಮನೆಗೆ ನಡೆದರು.  ಅಂದು ಅವರ ಮನೆಯಲ್ಲಿ ಮಕ್ಕಳು ಮೊಮ್ಮಕಳೊಂದಿಗೆ ಚಾಕಲೇಟನ್ನು ಹಂಚಿ ತಿಂದಿದ್ದರು.  ನಾಲಿಗೆಗಿಂತ ಪೊಟ್ಟಣದ ಆಕರ್ಷಕ ರಂಗು ಎಲ್ಲರನ್ನು ಸೆಳೆದಿತ್ತು.  ಸಿಹಿಯಾಗಿದ್ದಿದ್ದರಿಂದ ಎಲ್ಲರಿಗೂ ಸಂತಸದಿಂದ ಸವಿದರು.  ದಿನ ಕೆಲಸಕ್ಕೆ ಹೊರಡುವ ಮುನ್ನ ಕೆಲ ಚಾಕಲೇಟನ್ನು ಸಣ್ಣೇಗೌಡರು ಕಿಸೆಯಲ್ಲಿ ತುಂಬಿಕೊಂಡು ದಾರಿಯುದ್ದಕ್ಕೂ ತಿಂದು ಸಂತಸಪಟ್ಟರು.

ಐದು ಕೆ.ಜಿ. ಚಾಕಲೇಟು ಮುಗಿಯುತ್ತಿದ್ದಂತೆ, ಸಣ್ಣೇಗೌಡರಿಗೆ ಹೊಟ್ಟೆಯಲ್ಲಿ ಏನೋ ತೊಂದರೆಯಾದಂತೆ ಕಾಣತೊಡಗಿತು.  ಮೊದಮೊದಲು ಅಜೀರ್ಣತೆಯಿಂದಾಗಿದೆಯೆಂದು ತಿಳಿದರೂ, ಅದು ಬಹಳ ದಿನಗಳವರೆಗೆ ಮುಂದುವರೆಯಿತು.  ವೈದ್ಯರಲ್ಲಿ ತೋರಿಸಿದರು.  ವೈದ್ಯರು ಇವರ ಕೆಲಸ, ಆದಾಯ, ಇತ್ಯಾದಿಗಳನ್ನು ತಿಳಿದರು. ಹೊಟ್ಟೆಯಲ್ಲಿ ಇವರಿಗೆ ತೊಂದರೆಯಿದ್ದರೂ ಹೊಟ್ಟೆಯೊಂದಿಗೆ, ತಲೆಯ ಕ್ಷ-ಕಿರಣ ತರಬೇಕೆಂದೂ, ರಕ್ತ ಪರೀಕ್ಷೆ ಮಾಡಬೇಕೆಂದು ಆಗ್ರಹಿಸಿದರು.  ಸಣ್ಣೇಗೌಡರಿಗೆ ತಲೆಯ ಕ್ಷ-ಕಿರಣ ಏತಕ್ಕೆಂದು ಕೇಳಿದರು.  ಅದಕ್ಕೆ ವೈದ್ಯರು "ನೋಡ್ರಿ ಹೊಟ್ಟೆನ ಹತೋಟಿಯಲ್ಲಿ ಇಡೋದು, ನಿಮಗೆ ಹಸಿವು, ನೋವನ್ನು ತಿಳಿಸುವುದು ಮೆದುಳು ತಾನೆ?"  ಅದಕ್ಕೇ ಮೆದುಳಿನ ಕ್ಷ-ಕಿರಣ ಕೇಳಿದ್ದು ಎಂದು ಗುಡುಗಿದರು.

ವೈದ್ಯರಿಗೂ ಪಕ್ಕದಲ್ಲಿನ ಕ್ಷ-ಕಿರಣ ಮತ್ತು ಔಷಧಿ ಅಂಗಡಿಯವರೊಂದಿಗೆ ಒಳ ಒಪ್ಪಂದ ಏರ್ಪಾಟುಗೊಂಡಿತ್ತು.  ವೈದರು ಕಳುಹಿಸುವ ರೋಗಿಗಳಿಂದ ಬರುವ ಆದಾಯದಲ್ಲಿ ಕ್ಷ-ಕಿರಣ ಮತ್ತು ಔಷಧಿ ಅಂಗಡಿಯವರು ಶೇ.೨೫ ರಷ್ಟು ಹಣವನ್ನು ವೈದ್ಯರಿಗೆ ನೀಡುವುದೆಂದು ಒಪ್ಪಂದವಾಗಿತ್ತು.

ಸಣ್ಣೇಗೌಡರು ಬೇರೆ ದಾರಿ ಕಾಣದೇ ತಲೆ ಮತ್ತು ಹೊಟ್ಟೆಯ ಕ್ಷ-ಕಿರಣ ಮತ್ತು ರಕ್ತ ಪರೀಕ್ಷೆಯ ವರದಿ ತಂದು ಕೊಟ್ಟರು.  ಚಾಕಲೇಟಿನಲ್ಲಿ ಇದ್ದ ವಸ್ತುಗಳು ಸಣ್ಣೇಗೌಡರ ಹೊಟ್ಟೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದವು.  ಬೇಕೆಂತಲೇ ವೈದ್ಯರು ಹೆಚ್ಚು ಹಣದ ಔಷಧಿ ಬರೆದುಕೊಟ್ಟಿದ್ದರು.  ಸಣ್ಣೇಗೌಡರು ಔಷಧಿಗಳನ್ನು ಕೊಳ್ಳಲು ಹಣವೇ ಉಳಿದಿರಲಿಲ್ಲ.  ತಂದಿದ್ದ ಅಷ್ಟು ಹಣ ಕ್ಷ-ಕಿರಣ ಅಂಗಡಿಯವನಿಗೆ ಕೊಡಬೇಕಾಯಿತು.  ಮನೆಯ ಹತ್ತಿರ ಔಷಧಿ ಕೊಳ್ಳೋಣವೆಂದು ತನ್ನ ಮಗನೊಂದಿಗೆ ಮನೆಗೆ ನಡೆದರು.  ಮನೆಯ ಹತ್ತಿರ ಹತ್ತಾರು ಔಷಧಿ ಅಂಗಡಿಗಳಲ್ಲಿ ಹುಡುಕಿದರೂ ಆ ಔಷಧಿ ದೊರೆಯದಿದ್ದಾಗ ಸಣ್ಣೇಗೌಡರ ಮಗ, ಆಸ್ಪತ್ರೆಯ ಹತ್ತಿರ ಇದ್ದ ಔಷಧಿ ಅಂಗಡಿಗೆ ಬಂದು ಕೊಂಡು ಹೋದ.

ಔಷಧಿಗಳನ್ನು ಕೆಲ ದಿನಗಳು ತಿಂದ ನಂತರ ಸಣ್ಣೇಗೌಡರು ಮೊದಲಿನಂತಾದರು!  ಅವರ ಅನಾರೋಗ್ಯದ ಗುಟ್ಟು ಮತ್ತು ವೈದರಲ್ಲಿ ಅವರು ತೆತ್ತ ಹೆಚ್ಚು ಮೊತ್ತ ಅವರ ಅರಿವಿಗೆ ಬಾರದಂತೆ ಜೀವನ ಸಾಗಿತ್ತು.
     *****

0 comments: