Tuesday, July 12, 2022

Posted by ಬಡಗಿ | 0 comments

ರಸ್ಪೆರಿ ಪೈ ನ ಅನುಭವಗಳು

 


೧೫ ವರ್ಷಗಳ ಕೆಳಗೆ ನನ್ನ ಕೆಲಸದಲ್ಲಿ ನನಗೆ ಡೆಲ್ ಲ್ಯಾಟಿಟ್ಯೂಡ್ ಲ್ಯಾಪ್ ಟಾಪ್ ನೀಡಿದ್ದರು.  ಅದು ಬಹಳ ಗಟ್ಟಿಮುಟ್ಟಾಗಿತ್ತು.  ಮನೆಯಲ್ಲಿ ಸ್ವಂತ ಉಪಯೋಗಕ್ಕೆಂದು ಡಸ್ಕಟಾಪ್ ತೆಗೆದುಕೊಂಡಿದ್ದೆ.  ಲ್ಯಾಪ್ ಟಾಪ್ ಗಳ ದುಬಾರಿ ಬೆಲೆ ಕೊಡಲು ಆಗದೆ ಮತ್ತು ಬ್ಯಾಟರಿ ಬದಲಾವಣೆಯ ದುಡ್ಡು ಉಳಿಸಲು ಮತ್ತು ಡೆಸ್ಕ್ ಟಾಪ್ ಇದ್ದರೆ ಅದನ್ನು ಅಪ್‌ಗ್ರೇಡ್ ಅಥವಾ ರಿಪೇರಿ ಮಾಡಬಹುದೆಂಬ ನಂಬಿಕೆ ನನ್ನ ಒಲವು ಡೆಸ್ಕ್‌ಟಾಪ್ ಕಡೆಗೆ ಇತ್ತು. ಇದಾಗಲೇ ಮನೆಯಲ್ಲಿ ಎರಡು ಡೆಸ್ಕ್‌ಟಾಪ್‌ಗಳಿದ್ದವು.  ಓಂದು ೧೦ ವರುಷಗಳದ್ದು, ಇನ್ನೊಂದು ೪ ವರುಷಗಳದ್ದು. ಈ ೪ ವರುಷದ ಡೆಸ್ಕ್‌ಟಾಪ್ ನಾನು ಬೇರೆ ಊರಿನಲ್ಲಿದ್ದರಿಂದ ಕೊಂಡುಕೊಳ್ಳಬೇಕಾಯಿತು.

ಕರೋನಾದಿಂದಾಗಿ ಮನೆಯಿಂದ ಶಾಲೆ ನಡೆಯುತ್ತಿದ್ದಾಗ, ಮಗಳಿಗಾಗಿ ಲ್ಯಾಪ್‌ಟಾಪ್ ಕೊಂಡುಕೊಳ್ಳಲು ಮನೆಯವರಿಂದ ಬಹಳ ಒತ್ತಡಬಂದರೂ ಮಗಳಿಗೆ ೪ ವರ್ಷ ಹಳೆಯ ಡೆಸ್ಕ್‌ಟಾಪ್ ನೀಡಿ ೧೦ ವರ್ಷದ ಡೆಸ್ಕ್‌ಟಾಪ್ ನಾನು ಉಪಯೋಗಿಸುತ್ತಿದ್ದೆ.  ಈ ೧೦ ವರ್ಷದ ಡೆಸ್ಕ್‌ಟಾಪ್ ಇದಾಗಲೆ ಮೂರು ಬಾರಿ ರಿಪೇರಿ ಮಾಡಿಸಿದ್ದು ಪುನಃ ರಿಪೇರಿಗೆ ಬಂತು.  ಈ ಬಾರಿ ರಿಪೇರಿ ಮಾಡಿಸಿ ಅದನ್ನು ಒಂದು ಸಂಸ್ತೆಗೆ ದಾನ ಮಾಡಿದೆ.  ಅವರು ಅದನ್ನು ಉನ್ನತೀಕರಿಸಿ, ಅಥವಾ ಅದರ ಬಾಗಗಳನ್ನು ಉಪಯೋಗಿಸಿ ಸರಕಾರಿ ಶಾಲೆಗಳಿಗೆ ನೀಡುವರು.

ನನ್ನ ಉಪಯೋಗಕ್ಕೆ ಒಂದು ಗಣಕ ಬೇಕಾಗಿತ್ತು.  ಹೆಚ್ಚಿನ ದುಡ್ಡು ಇರಲಿಲ್ಲ.  ಆಗ ಹೊಳೆದದ್ದೇ ರಸ್ಪೆರಿ ಪೈ ೪ಬಿ. ಕೊರೋನಾದಿಂದಾಗಿ ಚಿಪ್ ಕೊರತೆಯಿಂದಾಗಿ ಸ್ಟಾಕ್ ಇಲ್ಲ. ಜೊತೆಗೆ ಹೊಸ ಆವೃತ್ತಿ ಬರುವುದೇನೊ ಕಾಯುವ ಎಂಬ ಮನಸ್ಸು. ಇದು ಆನಲೈನ್ ನಲ್ಲಿ ಕೊಳ್ಳಲು ನೋಡಿದರೆ, ಒಬ್ಬೊಬ್ಬರದು ಒಂದೊಂದು ಬೆಲೆ. ಕೊನೆಗೆ ಬೆಂಗಳೂರಿನ ಸಾದರ್ ಪತ್ರಪ್ಪ (ಎಸ್ ಪಿ) ರೋಡ್ ನಲ್ಲಿರುವ ಒಂದು ಅಂಗಡಿಯವರು ಆನ್‌ಲೈನ್ ನಲ್ಲಿ ಮಾರುತ್ತಿದ್ದರು. ಅತ್ತಕಡೆ ಹೋದಾಗ ಕೇಳಿದೆ. ಅವರ ಬಳಿ ೮ ಜಿಬಿ ರ್ಯಾಮ್ ನದ್ದು ಇಲ್ಲ, ೪ ಜಿಬಿ ದು ಇದೆ ಎಂದರು.  ಆದರೆ ಇವರ ಬಳಿ ಬೆಲೆ ಕಡಿಮೆ, ಯಾಕೆಂದರೆ ಇವರು ಹೋಲ್ ಸೆಲ್ ಡಿಸ್ಟ್ರಿಬ್ಯೂಟರ್. ಒಂದಷ್ಟು ದಿನ ಕಾದು ಇವರ ಬಳಿ ಕೊಂಡುಕೊಂಡೆ.

ಇದು ತನ್ನದೇ ಆದ ರೈಪೆಬಿಯನ್ ಓ ಎಸ್ ನಿಂದ ನಡೆಯಲ್ಪಡುತ್ತದೆ.  ಯೂ ಟ್ಯೂಬ್ ವಿಡಿಯೋಗಳನ್ನು ನೋಡಿ ಇದನ್ನು ಕೆಲಸ ಮಾಡಲು ಅನುವು ಮಾಡಿದೆ.  ನನ್ನ ಹೆಚ್ಚಿನ ಕೆಲಸವು ಕನ್ನಡದಲ್ಲಿರುವುದರಿಂದ, ದೊಡ್ಡ ತೊಡಕೊಂದು ಎದುರಾಯಿತು.  ಕನ್ನಡದಲ್ಲಿ ಟೈಪಿಸಲು ಏನು ಮಾಡುವುದು? ಅದನ್ನು ಹುಡುಕಿಕೊಂಡು ಹೋದಾಗ:

೧. "ಪದ" ಲಿನಕ್ಸ್ ಸಾಪ್ಟ್‌ವೇರ್.  ಆದರೆ ಇದನ್ನು ರಸ್ಪರಿ ಪೈನಲ್ಲಿ ಹಾಕಲು ಆಗದು.  ಲಿನಕ್ಸ್‌ನಲ್ಲಿ ಹಲವಾರು ಉಪ ಓ ಎಸ್ ಗಳು ಇವೆ.

೨. ಹೀಗೆ ತಡಕಾಡಿದಾಗ ಉಬುಂಟುವಿನಲ್ಲಿ "ಕನ್ನಡ" ಟೈಪಿಸಬಹುದು ಎಂದು ನೋಡಿದೆ.  ಆದರೆ "ಕ ಗ ಪ" ಕೀಲಿಮಣೆ ವಿಂಡೋಸ್ ಗಿಂತ ಬಿನ್ನ. "ಕ ಗ ಪ" ಕೀಲಿಮಣೆ ಎಂದರೆ ಎಲ್ಲಾ ಕಡೆ ಒಂದೇ ರೀತಿ ಇರಬೇಕಲ್ಲವೆ, ಆದರೆ ಇಲ್ಲಿ ಹಾಗಿಲ್ಲ.

೩. ಮುಂದೆ ಹುಡುಕುತ್ತಾ ಹೋದಾಗ ಆಶ್ಚರ್ಯ ಕಾದಿತ್ತು.  ಕನ್ನಡ ಕೀಲಿಮಣೆ ರಸ್ಪ್‌ಪೆರಿ ಪೈ ನಲ್ಲೇ ಇದೆ. ಕನ್ನಡದಲ್ಲಿ ಎರಡು ಕೀಲಿಮಣೆಗಳಿಗೆ. ಆದರೆ ಇಲ್ಲಿ "ಕ ಗ ಪ" ಕೀಲಿಮಣೆ ಉಬುಂಟುವಿಂತೆ ಕೆಲಸ ಮಾಡುತ್ತಿತ್ತು. ಮತ್ತು ಕೀಲಿಮಣೆ ಕನ್ನಡ "ಕ ಗ ಪ" ಆರಿಸಿದಾಗ ಆಂಗ್ಲ ಬಾಶೆಯಲ್ಲಿ ಟೈಪಿಸಲು ಆಗುತ್ತಿರಲಿಲ್ಲ.  ಮತ್ತೊಂದು ಕೀಲಿಮಣೆ ಆರಿಸಿದರೆ ಎರಡೂ ಬಾಶೆಗಳಲ್ಲಿ ಕೀಲಿಕರಿಸಬಹುದು.

೪. ಮತ್ತ ಹುಡುಕಾಟ.  ಆಗ ದೊರಕಿದ್ದು ಅಕ್ಷರ ಟೈಪ್ ಸ್ಟುಡಿಯೋರವರ ಆನ್‌ಲೈನ್ ಕನ್ನಡ ಟೈಪಿಂಗ್. ಇದು "ಕ ಗ ಪ" ಕೀಲಿಮಣೆಯಂತೆ ಮಾಡಿದ್ದಾರೆ. ಸ್ವಲ್ಪ ಸಮಾಧಾನವಾಯಿತು.  ಆದರೆ ಇದರಲ್ಲಿ ಅರ್ಕಾವತ್ತು ಬರೆಯಲು ಭಿನ್ನ ಕೀಲಿಗಳಿವೆ.

ಇದನ್ನು ಕೊಂಡುಕೊಂಡು ಇದಾಗಲೇ ಎರಡು ತಿಂಗಳಾಗಿವೆ.  ಇದರಲ್ಲಿ ನಾನು ಇದುವರೆವಿಗೂ ಮಾಡಿದ ಕೆಲಸಗಳು:

೧ ವೆಬ್‌ಸೈಟ್, ಫೇಸ್‌ಬುಕ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವುದು.

೨ ಫಾಂಟ್ ಪೋರ್ಜ್‌ನಲ್ಲಿ ಫಾಂಟ್ ರಚಿಸುವುದು

ನನಗೆ ಸಮಾಧಾನ ನೀಡಿದ ಅಂಶಗಳು:

೧. ಇದರಲ್ಲಿ ಹಲವಾರು ಗಂಟೆ ನಿರಂತರ ಕೆಲಸ ಮಾಡಬಹುದು.

೨. ಹೆಚ್ಚು ಬಿಸಿಯಾದಾಗ ಇದರಲ್ಲಿನ ತಾಪಮಾನದ ಸಂಖ್ಯೆ ನೋಡಿ ಆರಿಸಬಹುದು.

೩. ಇದಾಗಲೇ ಲಿಬ್ರೆ ಆಫೀಸ್ ನಲ್ಲಿ ಕೆಲಸ ಮಾಡಿದ್ದರಿಂದ ನನಗೆ ಹೆಚ್ಚಿನ ವ್ಯತ್ಯಾಸವೇನು ಕಾಣಿಸಲಿಲ್ಲ.

ನನಗೆ ಕಷ್ಟ ಎನಿಸಿದ ಅಂಶಗಳು:

೧. ಕ ಗ ಪ ಕೀಲಿಮಣೆ ಇದ್ದು, ಅದು ಬೇರೆ ಕೀಲಿಮಣೆ ಸಂಯೋಜನೆಯಲ್ಲಿರುವುದು

೨. ಇದನ್ನು ನಿಲ್ಲಿಸಲು "ಶಟ್ ಡೌನ್" ಮಾಡಲು ಮಿಂಚಿನ (ಪೊವರ) ಸಪ್ಲೈ ಸ್ವಿಚ್ಚನ್ನೇ ಆರಿಸಬೇಕಾಗಿರುವುದು.  ವಿಂಡೋಸ್ ರೀತಿ ಇದು ಆಫ್ ಆಗುವುದಿಲ್ಲ.  ಮೊನ್ನೆ ರಾತ್ರಿ ಮರೆತು ಇಡೀ ರಾತ್ರಿ ಆನ್ ಆಗೇ ಇತ್ತು.

೩. ಒಮ್ಮೊಮ್ಮೆ ವೈ ಫೈ ಕನೆಕ್ಟ್ ಆಗಲು ತಡ ಆಗುತ್ತಿರುವುದು.

೪. ಕೆಲವಷ್ಟು ಸಾಪ್ಟ್‌ವೇರ್ ಹಾಕಲು ಕಮಾಂಡ್ ಉಪಯೋಗಿಸಬೇಕಾಗಿರುವುದು.

೫. ವಿಂಡೋಸ್ ಉಪಯೋಗಿಸಿ ಇದನ್ನು ಸರಾಗವಾಗಿ ಉಪಯೋಗಿಸಲು ಕಲಿಯಲು ಕೆಲವಷ್ಟು ದಿನ, ಶ್ರಮ ಮತ್ತು ಸಮಯ ನೀಡಬೇಕಾಗಿರುವುದು.

೧೧ ಸಾವಿರ ರೂಪಾಯಿಯಲ್ಲಿ (ಮಾನಿಟರ್, ಕೀಬೋರ್ಡ, ಮೌಸ ಬಿಟ್ಟು) ಇಷ್ಟೊಂದು ವ್ಯವಸ್ತೆ ಪಡೆದುದರಿಂದ ನನಗೆ ಸಂತಸ ತಂದಿದೆ.

ಈ ಬರವಣಿಗೆಯನ್ನು ರಸ್ಪೆರಿ ಪೈನಲ್ಲೇ ಬರೆದದ್ದು.

0 comments: