Friday, November 30, 2007

Posted by ಬಡಗಿ | 0 comments

ರಾಜ್ಯೋತ್ಸವ !

ರಾಜ್ಯೋತ್ಸವದ ಶುಭಾಶಯ ಹೇಳ್ಲೇ ಇಲ್ಲವಲ್ಲ. ಕನ್ನಡದ ಬ್ಲಾಗ್ ಆಗಿದ್ದೂ ರಜ್ಯೋತ್ಸವದ ಶುಭಾಶಯ ಹೇಳದಿದ್ದರೆ ಹೇಗೆ. ಬಹಳ ದಿನಗಳಿಂದ ರಾಜ್ಯೋತ್ಸವದ ಶುಭಾಶಯ ತಿಳಿಸಬೇಕೆಂದರು ಬೆಂಬಿಡದ ಕೆಲಸಗಳು, ಬಿಡುವೇ ಇಲ್ಲದೆ ಒದ್ದಾಡುತ್ತಿದ್ದೆ. ಹೀಗಿದ್ದಾಗೆ ನೆನ್ನೆ ಒಂದು ವಿಚಿತ್ರ ಕಂಡೆ. ಪುಟ್ಟೇನಹಳ್ಳಿ ಜೆ.ಪಿ.ನಗರಕ್ಕೆ ಅಂಟಿಕೊಂಡ ಒಂದು ಹಳ್ಳಿ, ಈಗ ಬಡಾವಣೆ. ನಾವು ಅಲ್ಲಿ ನೆಲಸಲು ಬಂದಾಗ ಒಂದೇ ಬಸ್ಸು, ಒಂದೇ ವಾಹನ ಓಡಾಡುವಷ್ಟು ರಸ್ತೆ. ಕೆರೆ ತುಂಬಿ ತುಳುಕುತ್ತಿತ್ತು. ಸ್ವಚ್ಛವಾದ ನೀರು. ಬೆಂಗಳೂರು ಬೆಳೆದಂತೆಲ್ಲ ಇಲ್ಲಿ ಹಕ್ಕಿಗಳ ಹಾಗೆ ಜನ ಬಂದು ನೆಲಸತೊಡಗಿದರು, ನನ್ನಂತೆ ಇತರರಂತೆ. ಹೀಗೆ ಈ ಸಣ್ಣ ಒಂದೇ ವಾಹನ ರಸ್ತೆ ಹದಗೆಡುತ್ತಾ ಬಂತು. ಓಡಾಡಲು ದುಸ್ತರವಾಯ್ತು. ಆಗಿದ್ದದ್ದು ಒಂದೇ ಒಂದು ಕನ್ನಡದ ಬಾವುಟ ಪುಟ್ಟೇನಹಳ್ಳಿ ವೃತ್ತದಲ್ಲಿರುವ ಮಹಾಲಕ್ಷೀ ಗುಡಿಯ ಎದುರು. ಹೆಚ್ಚು ಕಾಲ ಹರಿದೇ ಹಾರಾಡುತ್ತಿದ್ದ ಈ ಬಾವುಟದ ಕಥೆ ಕೇಳುವವರೇ ಇಲ್ಲ. ಹೀಗಿತ್ತು ಈ ಕನ್ನಡದ ಸ್ಥಿತಿ ಇಲ್ಲಿ. ರಸ್ತೆ ಹದಗೆಟ್ಟು ಮೂರು ವರ್ಷಗಳೇ ಕಳೆದರೂ ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಜೆ.ಪಿ.ನಗರ ೭ & ೮ ನೇ ನಿವಾಸಿಗಳ ಸಂಘವನ್ನು ಬಿಟ್ಟರೆ. ಆರು ತಿಂಗಳ ಹಿಂದಷ್ಟೇ ಒಂದು ಒಳ್ಳೆ ರಸ್ತೆ ನಿರ್ಮಾಣವಾಯಿತು. ಕುಮಾರಸ್ವಾಮಿ ಅದನ್ನು ಉದ್ಘಾಟಿಸಿದರು. ಆಗ ಶುರುವಾಯಿತು ನೋಡಿ ಕನ್ನಡ ಸಂಘಗಳ ದಂಡು - ಗೌರವ ನಗರದ ಬನಶಂಕರಿ ಕನ್ನಡ ಯುವಕರ ಸಂಘ, ಬ್ರಿಗೇಡ್ ಮಿಲೆನಿಯಮ್ ಗೃಹಸ್ತೋಮದ ಹತ್ತಿರ ವಿಶ್ವೇಶ್ವರಯ್ಯ ಕನ್ನಡ ಬಳಗ, ಪುಟ್ಟೇನಹಳ್ಳಿ ಪಾಳ್ಯದಲ್ಲಿ ವೀರಕೇಸರಿ ಕನ್ನಡ ಯುವಕರ ಸಂಘ. ವಿಶ್ವೇಶ್ವರಯ್ಯ ಕನ್ನಡ ಬಳಗ ಒಂದು ಕನ್ನಡ ಕಟ್ಟೆಯನ್ನು ಕಟ್ಟಿಸಿ ಕುಮಾರಸ್ವಾಮಿ ಯವರಿಂದ ಉದ್ಘಾಟಿಸಿದ್ದರು.

ರಸ್ತೆ ಹದಗೆಟ್ಟಿದ್ದಾಗ ಈ ಎಲ್ಲ ಕನ್ನಡ ಸಂಘಗಳು ಎಲ್ಲಿ ಇದ್ದವು ಎಂಬುದೇ ತಿಳಿಯದಾಗಿದೆ ಇನ್ನು. ವೀರಕೇಸರಿ ಕನ್ನಡ ಸಂಘ ರಾಜ್ಯೋತ್ಸವ ಆಚರಿಸಿತು. ಆಚರಣೆಯಲ್ಲಿ ಆರ್ಕೆಸ್ಟ್ರ ಮತ್ತು ಕುಣಿತ ಇಟ್ಟಿದ್ದರು. ಎಂಥಾ ಹಾಡುಗಳವು. ನಾನು ಕೆಲಸ ಮುಗಿಸಿ ವಾಹನದಲ್ಲಿ ಬರುತ್ತಿದ್ದಾಗೆ ಕೇಳಿ ದಂಗಾದೆ, ನೋಡಿ ಆಶ್ಚರ್ಯಪಟ್ಟೆ. "ಪುಲ್ಲಿಂಗ, ಸ್ತ್ರೀಲಿಂಗ ಅಂಗಂಗ ಪಲ್ಲಂಗ" ಎಂಬ ರವಿಚಂದ್ರನ್ ಹಾಡು, ಹಾಡಿಗೆ ನೃತ್ಯ ನೀಡುತ್ತಿದ್ದ ಯುವತಿ. ಸುತ್ತೆಲ್ಲ ನೋಡುತ್ತಿದ್ದ ಪಡ್ಡೆ ಹೈಕಳು, ಶಿಳ್ಳೆ ಏನೂ ಎಂತ. ಅದರ ಮಜಾನೇ ಬೇರೆ. ಈ ರೀತಿ ಕನ್ನಡ ರಾಜ್ಯೋತ್ಸವ ಆಚರಣೆ ನಮಗೆ ಬೇಕೆ. ಕನ್ನಡ ಸಂಸ್ಕೃತಿಯೆಂದರೆ ಇದೇನೇ?

0 comments: